Tuesday, July 30, 2013

ನೆನೆವುದೆನ್ನ ಮನಂ ಅಂಕೋಲೆಯ‌ ಸೂರ್ಯೋದಯ‍-ಸೂರ್ಯಾಸ್ತಗಳಂ..!!

ಕನ್ನಡದ ಆದಿಕವಿ ಪಂಪ ತನ್ನ "ವಿಕ್ರಮಾರ್ಜುನ ವಿಜಯ"ದಲ್ಲಿ ಸೂರ್ಯೊದಯ‍-ಸೂರ್ಯಾಸ್ತಗಳೆರಡನ್ನು ತನ್ನ ಕಾವ್ಯವಸ್ತುವಿಗೆ ಬೇಕಾದಂತೆ ಸಮರ್ಥವಾಗಿ ಬಳಸಿಕೊಂಡಿದ್ದಾನೆ. ಅದರಲ್ಲೂ ಕರ್ಣನ ಜೀವನದ ಪ್ರಮುಖ ಘಟ್ಟಗಳನ್ನು ಚಿತ್ರಿಸುವಾಗ. ಅದಕ್ಕೆ ಕಾರಣ ಕರ್ಣನು ಸೂರ್ಯನ ಪುತ್ರನೆಂಬುದು.ಅದೇ ರೀತಿ ಕುಮಾರವ್ಯಾಸ, ಕುವೆಂಪು, ಬೇಂದ್ರೆ ಎಲ್ಲರೂ ಸೂರ್ಯೋದಯ‍-ಸೂರ್ಯಾಸ್ತಗಳನ್ನು ತಂತಮ್ಮ ಭಾವಕ್ಕೆ ತಕ್ಕಂತೆ ಚಿತ್ರಿಸಿದ್ದಾರೆ, ಪ್ರತಿಮೆಗಳನ್ನು ಕಟ್ಟಿಕೊಟ್ಟಿದ್ದಾರೆ.

ಈ ರೀತಿ ಕವಿಹೃದಯಕ್ಕೆ ಸ್ಪೂರ್ತಿ ಒದಗಿಸುವ ನೈಸರ್ಗಿಕ ಕ್ರಿಯೆಗಳಲ್ಲಿ ಬಹುಶಃ ಸೂರ್ಯೋದಯ‍-ಸೂರ್ಯಾಸ್ತಗಳು ಮೊದಲು ನಿಲ್ಲುತ್ತವೆ. ನಮ್ಮೆಲ್ಲರನ್ನು ತನ್ನ ಕಿರಣಗಳಿಂದ ಸಲುಹುವ ಸೂರ್ಯ ಕೇವಲ ಶಕ್ತಿಯ ಆಕರವಾಗಿರದೆ ಮನಸ್ಸನ್ನು ಹಿಗ್ಗಿಸುವ ಭಾವಚೇತನವೂ ಆಗಿದ್ದಾನೆ. 

ಕಾಡು ಕಡಲೆರಡು ತುಂಬಿರುವ ತಾಲೂಕು ನಮ್ಮ ಅಂಕೋಲೆ.. ಆದ ಕಾರಣ ಸುಂದರ ಸೂರ್ಯೋದಯ‍-ಸೂರ್ಯಾಸ್ತಗಳನ್ನು ನೋಡಲು ಜಾಗಗಳ ಕೊರತೆಯಿಲ್ಲ. ಸೂರ್ಯೋದಯ‍ ಸಾಮಾನ್ಯ ಬೆಟ್ಟದಾಚೆಯಾದರೆ, ಸೂರ್ಯಾಸ್ತವನ್ನು ಬೆಟ್ಟದಾಚೆ ಅಥವಾ ಸಮುದ್ರದಲ್ಲಿ ನೋಡಬಹುದು. ಸಂಜೆ ಆರಾದರೆ ನಾನು ಸೂರ್ಯಾಸ್ತ ನೋಡಲು ಹೋಗುವ ಸಾಮಾನ್ಯ ಜಾಗವೆಂದರೆ ನಮ್ಮೂರ ಬೊಮ್ಮಯ್ಯ ದೇವರಗುಡಿಯಿರುವ ಗುಡ್ಡ. ಸುತ್ತಲಿನ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಊರುಗಳು ಇಲ್ಲಿಂದ ಕಾಣುತ್ತವೆ. ಕೆಲವೊಮ್ಮೆ ಸಮುದ್ರ ತೀರಕ್ಕೆ, ಗದ್ದೆ ಬಯಲಿಗೆ ಸೂರ್ಯ ಮುಳುಗುವುದನ್ನು ನೋಡಲು ಹೋದರೆ ಇನ್ನು ಕೆಲಬಾರಿ ನದಿಯ ತೀರಕ್ಕೆ ಹೋಗುತ್ತೇನೆ. ಕಳೆದ ಕೆಲ ವರ್ಷಗಳಿಂದ ನಮ್ಮೂರ ಸುತ್ತಮುತ್ತಲಿನ ಅನೇಕೆಡೆ ಕಂಡ ಸೂರ್ಯಾಸ್ತಗಳಿವು.


  @ಹೊನ್ನೆಬೈಲ್ ಬೀಚ್

@ಗಂಗಾವಳಿ ನದಿಯಲ್ಲಿರುವ ಕೂರ್ವೆ ದ್ವೀಪ‌. .ಇದು ನನ್ನ ಫೇವರಿಟ್ :-)

@ಗಂಗಾವಳಿ ನದಿಯಲ್ಲಿರುವ ಕೂರ್ವೆ ದ್ವೀಪ‌

@ಗಂಗಾವಳಿ ನದಿಯಲ್ಲಿರುವ ಕೂರ್ವೆ ದ್ವೀಪ‌

@ಬೇಲೇಕೇರಿ ಬೀಚ್

@ಸೂರ್ವೆಯ ಬೊಮ್ಮಯ್ಯ ದೇವರ ಗುಡ್ಡ‌

@ಬೇಲೇಕೇರಿ ಬೀಚ್

@ಬೇಲೇಕೇರಿ ಬೀಚ್

@ಬೇಲೇಕೇರಿ ಬೀಚ್

@ಶಿರೂರು..

@ಬೆಳಂಬಾರ‌


@ಸೂರ್ವೆಯ ಬೊಮ್ಮಯ್ಯ ದೇವರ ಗುಡ್ಡ‌


@ಸೂರ್ವೆಯ ಬೊಮ್ಮಯ್ಯ ದೇವರ ಗುಡ್ಡ‌

ನಾನಿಲ್ಲಿ ಅಪ್ ಲೋಡ್ ಮಾಡಿರುವ ಪೋಟೋಗಳೆಲ್ಲವೂ ಸೂರ್ಯಾಸ್ತದ ಚಿತ್ರಗಳೇ. ಸೂರ್ಯೋದಯವನ್ನು ಕ್ಲಿಕ್ಕಿಸುವ ಪ್ಲ್ಯಾನ್ ಇದ್ದರೂ ಬೆಳಕು ಹ‌ರಿಯುವ ಮುನ್ನವೇ ಎದ್ದು,  ಚೆನ್ನಾಗಿ  ಸೂರ್ಯೊದಯ ಚೆನ್ನಾಗಿ ಗೋಚರಿಸುವ‌ ಜಾಗಕ್ಕೆ ಹೋಗಿ "ಗೆಟ್ ಸೆಟ್" ಅಂತಾ ಕ್ಯಾಮೆರಾ ಹಿಡಿದು ನಿಲ್ಲಲು ಸೋಮಾರಿತನ. ಆದರೆ ಪ್ಲ್ಯಾನಂತೂ ಇದೆ.

ಅಂದ ಹಾಗೆ ನನ್ನಲ್ಲಿದ್ದ ದಿನಕರ ಚೌಪದಿಯಲ್ಲಿ ದಿನಕರ ದೇಸಾಯಿಯವರು  (ದಿನಕರನೆಂದರೂ ಸೂರ್ಯನೇ :‍-)) ಅಂಕೋಲೆಯ ಸೂರ್ಯಾಸ್ತ‍-ಸೂರ್ಯೋದಯಗಳ ಬಗ್ಗೆ ಏನಾದರೂ ಚುಟುಕನ್ನು ಬರೆದಿದ್ದಾರೆಯೇ ಎಂಬ ಕೂತುಹಲದಲ್ಲಿ ನೋಡಿದಾಗ‌ ಯಾವ ಚುಟುಕಗಳೂ ಕಾಣಸಿಗಲಿಲ್ಲ. ಬಹುಶಃ ವರ್ಣಾನಾತೀತ ಎಂದು ಬಿಟ್ಟಿರಬಹುದು..:-)

Tuesday, July 16, 2013

ಪುನರಾಗಮನ‌..

ಬ್ಲಾಗ್ ಲೋಕವನ್ನು ಬಿಟ್ಟು ಸರಿಯಾಗಿ ನಾಲ್ಕು ವರ್ಷಗಳೇ ಆಗಿ ಹೋಗಿವೆ.. ಅನೇಕ ಹೊಸ ಹೊಸ ಅನುಭವಗಳು, ಅಂಕೋಲೆಯ ಸುತ್ತಲಿನ ಅನೇಕ ಸ್ಥಳಗಳನ್ನು ಸುತ್ತಿದರೂ ಅವುಗಳನ್ನು ಇಲ್ಲಿ ಹಂಚಿಕೊಳ್ಳಲಾಗಲಿಲ್ಲ. ಇಂದು ಪುನ: ಬ್ಲಾಗ್ ಮಡಿಲಿಗೆ ಬಂದಿರುವೆ..ನನ್ನೂರಿನ ಗಂಗಾವಳಿಯ ಚಿತ್ರಗಳ ಮೂಲಕ ಈ ಹೊಸ ಪ್ರಯಾಣವನ್ನು ಶುರುಮಾಡಲು ಬಯಸಿದ್ದರಿಂದ ನದಿಯ ಕೆಲ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದೇನೆ..

Tuesday, July 7, 2009

ಹಾಸ್ಟೆಲ್ನ ನೆನಪಿಗೆ.....

ನಾಳೆ ನನ್ನ ಹಾಸ್ಟೆಲ್ ಜೀವನದ ಕೊನೆಯ ದಿನ..ಏನನ್ನು ಬರೆಯಬೇಕೆಂದು ತೋಚುತ್ತಿಲ್ಲ.. ಎಲ್ಲಿಂದಲೋ ಬಂದು ಗೆಳೆಯರಾಗಿ, ರೂಮ್ ಮೇಟಗಳಾಗಿ ಇದ್ದವರು ಪುನಃ ಬಂದಂತೆ ಹಿಂತಿರುಗಿ ಹೋಗಿದ್ದಾರೆ. ಬದುಕಿನ ಅತ್ಯಂತ ಒಳ್ಳೆಯ ದಿನಗಳನ್ನು ನಾನಿಲ್ಲಿ ಕಳೆದಿದ್ದೇನೆ.. ಬಿಟ್ಟು ಹೋಗಲು ಮನಸಿಲ್ಲದಿದ್ದರೂ ಹೋಗಲೇಬೇಕಾಗಿದೆ..ಕೂಪ ಮಂಡೂಕನಂತಿದ್ದ ನನಗೆ ಜೀವನದ ಪಾಠ ಹೇಳಿಕೊಟ್ಟ ಶಾಲೆ ಈ ಹಾಸ್ಟೆಲ್.. ನಾಲ್ಕು ವರ್ಷ ನಾಲ್ಕು ಹಾಸ್ಟೆಲ್ ಬ್ಲಾಕುಗಳು.. ನಾನಿದ್ದ ಪ್ರತಿಯೊಂದು ಹಾಸ್ಟೆಲ್ ಬ್ಲಾಕಿನ ಒಂದೊಂದು ರೂಮಿನೊಂದಿಗೂ ಅನೇಕ ನೆನೆಪುಗಳು ಇವೆ.. ಅವೆಲ್ಲವುಗಳ ನೆನಪಿಗೆ ಈ ಪೋಸ್ಟ್....
ನನ್ನೆಲ್ಲ ಗೆಳೆಯರಿಗೂ ಹಾಗೂ ಈ ನಾಲ್ಕು ವರ್ಷಗಳಲ್ಲಿ ನಮ್ಮೆಲ್ಲರಿಗೂ 'ಅನ್ನದಾತ'ರಾದ ಹಾಸ್ಟೆಲ್ ಮೆಸ್ ನ ಸಿಬ್ಬಂದಿ ವರ್ಗದವರಿಗೆ ನಾನು ಚಿರಋಣಿ.. Hostel Life, I miss u....

Thursday, June 18, 2009

ಹಿಚ್ಕಡ ಕುರ್ವೆ

ಅಂಕೋಲೆಯ ಕಡೆ ಮಳೆ ಜೋರಾಗಿ ನಾಲ್ಕಾರು ದಿನ ಬಿತ್ತೆಂದರೆ ಪ್ರಚಾರಕ್ಕೆ ಬರುವ ಸ್ಥಳವೆಂದರೆ ಕುರ್ವೆ, ಒಂದು ಚಿಕ್ಕ ದ್ವೀಪ. ಅಂಕೋಲೆಯ ಗಂಗೆ ಗಂಗಾವಳಿ(ಗೆಳೆಯ ತೇಜುವಿನ ಹೊಸ ನಾಮಕರಣ 'ನಮ್ ಗಂಗು') ನದಿ ಧಾರವಾಡದ ಹತ್ತಿರ ಆಗಮಿಸಿ ಅಂಕೋಲಾ ಮತ್ತು ಕುಮಟಾ ತಾಲೂಕಿನ ಸರಹದ್ದಿನಲ್ಲಿ ಅರಬ್ಬೀ ಸಮುದ್ರ ಸೇರುತ್ತದೆ. ನದಿಯ ಮುಖಜಭೂಮಿಯಿಂದ 4 ಕಿ.ಮೀ. ಹಿಂದೆ ವಜ್ರಾಕಾರದ ಈ ಪುಟ್ಟ ದ್ವೀಪವಿದೆ. ನದಿ ಮಧ್ಯದಲ್ಲಿರುವ ಇಂತಹ ಚಿಕ್ಕ ದ್ವೀಪಗಳಿಗೆ ಸಾಮಾನ್ಯವಾಗಿ 'ಕುರ್ವೆ' ಎನ್ನುತ್ತಾರೆ. ಉತ್ತರ ಕನ್ನಡದಲ್ಲಿ ಅಘನಾಶಿನಿ ನದಿಯ ಐಗಳ ಕುರ್ವೆ, ಶರಾವತಿ ನದಿಯ ಮಾವಿನಕುರ್ವೆ ಹೀಗೆ ನಾಲ್ಕಾರು ಪ್ರಸಿದ್ದವಾದ ಕುರ್ವೆಗಳಿವೆ. ಸಾಮಾನ್ಯವಾಗಿ ಸಮೀಪದಲ್ಲಿರೋ ಊರ ಹೆಸರಿನಿಂದಲೋ ಅಥವಾ ಅಲ್ಲಿ ವಾಸಿಸುವ ಜನಾಂಗದ ಹೆಸರಿನಿಂದಲೇ ಆ ಕುರ್ವೆಯನ್ನು ಕರೆಯಲಾಗುತ್ತದೆ. ನಮ್ಮ ಈ ಕುರ್ವೆಯ ಸಮೀಪದಲ್ಲಿ ಹಿಚ್ಕಡ ಎಂಬ ಊರು ಇರುವುದರಿಂದ ಇದನ್ನು 'ಹಿಚ್ಕಡ ಕುರ್ವೆ' ಎಂದು ಕರೆಯುತ್ತಾರೆ.

ಸುಮಾರು 44 ಎಕರೆ ವಿಸ್ತೀರ್ಣದ ಈ ನಡುಗಡ್ಡೆಯ ತುಂಬ ತೆಂಗಿನಮರಗಳು ಇವೆಯೆಂದು ಕೇಳಿದ್ದೆ. ಮೊನ್ನೆ ಮೇ ತಿಂಗಳ ಕೊನೆಯಲ್ಲಿ ಮನೆಗೆ ಹೋದಾಗ ಅಲ್ಲಿಗೆ ಹೋಗಿಬಂದಾಯಿತು.. ಈ ಹಿಂದೆ ಚಿಕ್ಕವನಿರುವಾಗ ಕಾಳಿನದಿಯಲ್ಲಿ ಮರದ ದೋಣಿಯಲ್ಲಿ ಹೋಗಿದ್ದನ್ನು ಬಿಟ್ಟರೆ ಇನ್ನೆಲ್ಲ ಕಡೆ ನದಿ ದಾಟುವಾಗ ಯಾಂತ್ರೀಕೃತ ಬಾರ್ಜಲ್ಲೇ ಹೋಗಿದ್ದು.. ಆದ್ದರಿಂದ ಸುಮಾರು ಒಂದು ದಶಕದ ನಂತರ ಪುನ: ಮರದ ಚಿಕ್ಕ ದೋಣಿಯಲ್ಲು ಹೋಗುವ ಅವಕಾಶ ಸಿಕ್ಕಿತ್ತು..ಕಾಳಿನದಿಯ ಆ ದೋಣಿಗಳಾದರೂ ಸುಮಾರು 12 ರಿಂದ 16 ಜನರನ್ನು ಕೊಂಡೊಯ್ಯುವ ಸಾಮರ್ಥ್ಯವುಳ್ಳವಾದ್ದರಿಂದ ಆ ದೋಣಿಗಳ ಮೇಲೆ ಹೋಗಲು ಅಷ್ಟೊಂದು ಭಯವಾಗುತ್ತಿರಲಿಲ್ಲ. ಆದರೆ ಈ ಪುಟ್ಟ ದೋಣಿಯ ಮೇಲೆ ಹೆದರುತ್ತಲೇ ನಾನು ಮತ್ತು ತೇಜು ಕುರ್ವೆ ಕಾಲಿಟ್ಟಾಯಿತು.. ನದಿ ಮಧ್ಯದಲ್ಲಿ ಸಾಗುವಾಗ ದೂರದಲ್ಲಿನ ಗಂಗಾವಳಿ ರೈಲ್ವೆ ಬ್ರಿದ್ಜು , ನದಿ ಇನ್ನೊಂದು ತೀರದಲ್ಲಿರುವ ಇನ್ನು ಕೆಲ ಹಳ್ಳಿಗಳು ಕಣ್ಣಿಗೆ ಮುದ ನೀಡುತ್ತಿದ್ದವು. ಕೆಲ ನಿಮಿಷಗಳಲ್ಲೇ ಕುರ್ವೆ ದಡ ತಲುಪಿದರೂ ಸಹ ಪುನಃ ಮನೆಗೆ ಹೋಗುವಾಗ ಆ ಪುಟ್ಟ ದೋಣಿಯ ಮೇಲೆ ಹೋಗಬೇಕೆಂಬ ಭಯ ನನಗೆ..

ತೆಂಗಿನ ತೋಟಗಳಿಂದಲೇ ತುಂಬಿದ ಕುರ್ವೆಯಲ್ಲಿ ಸುಮಾರು ಇಪ್ಪತ್ತೈದು ಕುಟುಂಬಗಳಿದ್ದು ಒಂದು ಶಾಲೆ ಇದೆ. ವಿದ್ಯುತ್ತಿನ ಸಂಪರ್ಕ ಕೂಡ ಇದೆ. ತೋಟಗಾರಿಕೆ ಮತ್ತು ಮೀನುಗಾರಿಕೆಯ ಮೇಲೆ ಇಲ್ಲಿನ ಜನ ಅವಲಂಬಿಸಿದ್ದಾರೆ. ಅಲ್ಲಲ್ಲಿ 'ಪಾರ್ಕಿಂಗ್' ಮಾಡಿದ ದೋಣಿಗಳೂ ಕೂಡ ಕಣ್ಣಿಗೆ ಬೀಳುತ್ತಿದ್ದು ಕೆಲವೆಡೆ 'ಕಲ್ಗ' ಎನ್ನೋ ವಿಶೇಷವಾದ ಜೀವಿಗಳಿರೋ ಕಲ್ಲುಗಳು (ಊರ ಕಡೆ ಈ ಕಲ್ಲುಗಳನ್ನು ಕಲ್ಗನ ಮುಯ್ಡು ಎನ್ನುತ್ತಾರೆ) ಕಾಣಸಿಗುತ್ತಿದ್ದವು. ಕೆಲ ತೆಂಗಿನಮರಗಳು ದಂಡೆಯಿಂದ ನಭದೆಡೆಗೆ ನೆಗೆಯುತ್ತಿದ್ದಂತೆ ಭಾಸವಾಗುತ್ತಿದ್ದರೆ ಇನ್ನು ಕೆಲವು ನದಿ ನೀರನ್ನು ಚುಂಬಿಸಲು ಹವಣಿಸುತ್ತಿದ್ದಂತೆ ಅನಿಸುತ್ತಿತ್ತು.

ಇನ್ನು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಈ ದ್ವೀಪವನ್ನು ಚಳುವಳಿಗಾರರು ಭೂಗತವಾಗುವುದಕ್ಕೆ ಬಳಸಿಕೊಳ್ಳುತ್ತಿದ್ದರಂತೆ. ಈ ನಡುಗಡ್ಡೆಯಲ್ಲಿರುವಾಗ ಗಂಗಾವಳಿ ನಮ್ಮನ್ನು ಸುತ್ತುವರೆದಿದ್ದರಿಂದ "ನಾ ಖೈದಿ ನೀನೆ ಸೆರೆಮನೆ" ಎಂಬ ಮುಂಗಾರುಮಳೆಯ ಲೈನ್ ನೆನಪಿಗೆ ಬರುತಿತ್ತು. ಸಂಜೆಯ ವಿಹಾರಕ್ಕೆ ಹೇಳಿ ಮಾಡಿಸಿದಂತಿರುವ ಈ ಸ್ಥಳದ ಬಗ್ಗೆ ಪ್ರೊ.ಜಿ.ಎಚ್.ನಾಯಕರು "ಪ್ರಕೃತಿಯೇ ಸೌಂದರ್ಯದ ಚಿತ್ರ ಬಿಡಿಸಿದಂತೆ ಇದೆ ಸುತ್ತಮುತ್ತಲಿನ ವಾತಾವರಣ" ಎಂದು ಒಂದೆಡೆ ಬರೆದಿದ್ದಾರೆ. ಆದರೆ ಇಲ್ಲಿನ ಜನರು ತೊಂದರೆಗೊಳಗಾಗುವುದು ಮಳೆಗಾಲದಲ್ಲಿ. ಭಾರೀ ಮಳೆ ಸುರಿಯಿತೆಂದರೆ ಸಾಕು ನಮ್ ಗಂಗುವಿನ ನೀರಿನ ಮಟ್ಟವೇರಿ ಈ ದ್ವೀಪ ಮುಳುಗಲು ಪ್ರಾರಂಭವಾಗುತ್ತದೆ. ಆಗ ಇಲ್ಲಿನ ಜನರಿಗೆ ಆಶ್ರಯ ನೀಡುವ ಸ್ಥಳಗಳೆಂದರೆ ಎಡ ದಂಡೆಯ ಮೇಲಿರುವ ಹಿಚ್ಕಡ ಊರಿನ ಗಂಜಿಕೇಂದ್ರ ಹಾಗೂ ಬಲ ದಂಡೆಯ ಮೇಲಿರುವ ಅಗ್ಗರಗೋಣ ಅಥವಾ ಸಗಡಗೇರಿ ಶಾಲೆಯಲ್ಲಿ ಶುರುಮಾಡುವ ಗಂಜೀಕೇಂದ್ರಗಳು..ಇನ್ನೊಮ್ಮೆ ಮಳೆಗಾಲ ಪ್ರಾರಂಭವಾಗಿದೆ. ನಮ್ ಗಂಗು ಎನಾದರೂ ಮೈತುಂಬ ಹರಿದರೆ ಮತ್ತೆ ಇಲ್ಲಿನ ಜನರಿಗೆ ಕಷ್ಟ ತಪ್ಪಿದ್ದಲ್ಲ. ಕಳೆದ ಬಾರಿಯೂ ಕುರ್ವೆಯನ್ನು ಮುಳುಗಿಸಿ ಮಂತ್ರಿಗಳೇ ಆಶ್ರಯ ತಾಣಗಳಿಗೆ ಬರುವಂತೆ ಮಾಡಿದ್ದ ನಮ್ ಗಂಗು ಈ ಬಾರಿಯಾದರೂ ಇಲ್ಲಿನ ಜನರ ಮೇಲೆ ಕೃಪೆ ತೋರುವಳೇ ಎಂದು ನೋಡಬೇಕಾಗಿದೆ.

Tuesday, June 2, 2009

ಅಂಕೋಲೆಯ ಕಡಲತೀರಗಳು

"It may be a fraction.. but still it counts" ಎನ್ನುತ್ತಲೇ ಸ್ವಲ್ಪ ಅಂಕಿ-ಅಂಶಗಳನ್ನು ಹೇಳಿ ಮುಂದೆ ಹೋಗುವೆ. ನಮ್ಮ ದೇಶವು 7516 ಕಿ.ಮೀ.ಗಳಷ್ಟು ಉದ್ದದ ಕಡಲತೀರವನ್ನು ಹೊಂದಿದೆ. ಅದರಲ್ಲಿ ಕರ್ನಾಟಕದ ಪಾಲು 320 ಕಿ.ಮೀ.ಗಳು. ಕರ್ನಾಟಕ ಕರಾವಳಿ ಪ್ರದೇಶವು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಂಚಿಹೋಗಿದೆ. ಉತ್ತರ ಕನ್ನಡದ ಕರಾವಳಿ ಪ್ರದೇಶ 140 ಕಿ.ಮೀ.ಗಳು. ಉತ್ತರ ಕನ್ನಡದ ಒಟ್ಟು 11 ತಾಲೂಕುಗಳಲ್ಲಿ 5 ತಾಲೂಕುಗಳು ಕರಾವಳಿ ತಾಲೂಕುಗಳು. ಅವುಗಳೆಂದರೆ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ. ನಮ್ಮ ಅಂಕೋಲೆಯ ಕರಾವಳಿ ತೀರ ಸುಮಾರು 18.5 ಕಿ.ಮೀ. ಗಳು. ಅಂದ್ರೆ 0.24 ಶೇಕಡಾ :) ಹಾರವಾಡ, ಬೇಲೇಕೇರಿ, ಬಾವಿಕೇರಿ, ಕೇಣಿ, ಅಂಕೋಲ ಪಟ್ಟಣ, ತೆಂಕಣಕೇರಿ, ನದಿಬಾಗ, ಬೆಳಂಬಾರ, ವಾಡಿಬೊಗ್ರಿ, ಹೊನ್ನೆಬೈಲ್, ಮಂಜಗುಣಿ ಊರುಗಳು ಅಂಕೋಲಾ ತಾಲೂಕಿನ ತೀರ ಪ್ರದೇಶವನ್ನು ಹಂಚಿಕೊಂಡಿವೆ. ಅಂಕೋಲೆಯ ಕಡಲ ತೀರ ಪ್ರದೇಶವು ಅನೇಕ ಮಹತ್ವ ಸ್ಥಳಗಳನ್ನು ಹೊಂದಿದೆ.

ಬ್ರಿಟಿಷರ ಕಾಲದಿಂದಲೂ ಉತ್ತಮ ಬಂದರಾಗಿರುವ ಬೇಲೇಕೇರಿಯು ಇಂದು ಕರ್ನಾಟಕದ ೧೦ ಮುಖ್ಯ ಬಂದರುಗಳಲ್ಲಿ ಒಂದು. ಅಲ್ಲದೇ ಉತ್ತಮ ಕಡಲ ಕಿನಾರೆಯನ್ನು ಹೊಂದಿರುವ ಈ ತೀರಕ್ಕೆ “Beach which has a potential of International Tourism” (ಅಂತರಾಷ್ಟ್ರೀಯ ಪ್ರವಾಸಯೋಗ್ಯ ಸಮುದ್ರತೀರ) ಎಂದು ಮಾನ್ಯತೆ ನೀಡಲಾಗಿದೆ. ಕರ್ನಾಟಕದಲ್ಲಿರುವ “ಅ” ಶ್ರೇಣಿಯ ಕೇವಲ ೫ ಸಮುದ್ರದಂಡೆಗಳಲ್ಲಿ ಬೇಲೇಕೇರಿಯೂ ಒಂದು. ಇದು ಕೇವಲ ಉತ್ತಮ ಬಂದರು ಮಾತ್ರವಲ್ಲದೇ ಉತ್ತಮ ಪ್ರವಾಸೀತಾಣವೂ ಆಗಿದ್ದು ಇಲ್ಲಿನ ಸೂರ್ಯಾಸ್ತ ನಯನಮನೋಹರ.
ಬೇಲೇಕೇರಿ

ಹೊನ್ನೆಬೈಲ್ ನ ಸಮುದ್ರದಂಡೆ ಸಹ ಇತ್ತೀಚೆಗೆ “ಹೊನ್ನೆ ಬೀಚ್” ಎಂಬ ಹೆಸರಿನಿಂದ ಪ್ರಸಿದ್ಧವಾಗುತ್ತಿದೆ. ಇತ್ತೀಚೆಗೆ ರೆಸಾರ್ಟ್ ವ್ಯವಸ್ಥೆಯನ್ನು ಕೂಡ ಇಲ್ಲಿ ಪ್ರಾರಂಭಿಸಲಾಗಿದೆ. ಇನ್ನು ಅಂಕೋಲಾ ಪಟ್ಟಣದಿಂದ ಸುಮಾರು 2-3 ಕಿ.ಮೀ.ದೂರದಲ್ಲಿರುವ ನದಿಭಾಗದ ಕಡಲತೀರವೂ ಸಹ ತನ್ನ ಹಾಲ್ನೊರೆಯ ಅಲೆಗಳಿಂದ ಮನಮೋಹಕವಾಗಿದೆ. ಪಕ್ಕದಲ್ಲೇ ಬಸಕಲ್ಲು ಗುಡ್ಡವಿದ್ದು ಅದರ ತುದಿಯಿಂದ ಸಮುದ್ರವನ್ನು ನೋಡಬಹುದು. ಮಳೆಗಾಲದ ಸಮಯದಲ್ಲಿ ಹೆಚ್ಚಿನ ನೀರು ಹೊರಬಂದು "ಕೋಡಿ" ಉಂಟಾಗಿ ಒಂದು ಚಿಕ್ಕ ಹಳ್ಳವನ್ನೇ ನಿರ್ಮಿಸುತ್ತದೆ. ಇದನ್ನು ಗೆಝೆಟಿಯರಗಳಲ್ಲೆಲ್ಲ ಅಂಕೋಲಾ 'ನದಿ'ಯೆಂದು ಕರೆದರೂ ಸಹ ನದಿ ಎಂಬ ಸ್ಥಾನಮಾನ ಸ್ವಲ್ಪ ಹೆಚ್ಚೇ ಆಯಿತೇನೋ ಎಂಬ ಭಾವನೆ ನನ್ನದು. ವಾತದ ಔಷಧಿಗೆ ಹೆಸರುವಾಸಿಯಾಗಿರುವ ಬೆಳಂಬಾರ ಸಹ ಕಡಲತೀರದಲ್ಲಿರುವ ಊರು.ಮೀನುಗಾರಿಕೆಗೆ ಹೆಸರಾದ ಊರು. ಆದರೆ ನಿರಂತರ ಕಡಲ್ಗೊರೆತದ ಕಾರಣ ಪ್ರವಾಸೋದ್ಯಮದ ದೃಷ್ಟಿಯಿಂದ ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆದಿರುವುದಿಲ್ಲ.


ಹೊನ್ನೆ ಬೀಚ್


ಬೆಳಂಬಾರ

"Coastal Ecosystems of the Karnataka State, India" ಪುಸ್ತಕದಲ್ಲಿ ಕರ್ನಾಟಕದ ಎಲ್ಲ ಕಡಲತೀರಗಳ ಜೈವಿಕ ವ್ಯವಸ್ಥೆಯ ಬಗ್ಗೆ ಮಾಹಿತಿಯಿದ್ದು ಎಲ್ಲ ಕಡಲತೀರಗಳನ್ನು ಅವುಗಳ ಗುಣಧರ್ಮಗಳ ಆಧಾರದ ಮೇಲೆ ರೇಟಿಂಗ್ ಮಾಡಲಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಅಂಕೋಲೆಯ ಕಡಲತೀರಗಳ ರೇಟಿಂಗ್ ಇಂತಿದೆ.

ಮಂಜುಗುಣಿ ( ಗಂಗಾವಳಿ ನದಿಯ ಮುಖಜಭೂಮಿ ಇರುವ ಪ್ರದೇಶ) ........B
ಹೊನ್ನೆಬೈಲು..............C
ಬೆಳಂಬಾರ..............E
ನದಿಬಾಗ್.........E (ಪ್ರಾಕೃತಿಕವಾಗಿ ಸುಂದರ ತೀರವಾದರೂ ಕಡಲ್ಗೊರೆತಕ್ಕೆ ತುತ್ತಾಗುತ್ತಿದೆ)
ಬೊಬ್ರುವಾಡ...........E
ಬಾವಿಕೇರಿ.............B
ಬೇಲೇಕೇರಿ................A
ಹಾರವಾಡ.............B

ನದಿಬಾಗ

ದೂರದ ಧಾರವಾಡದಿಂದ ಅಂಕೋಲೆಯನ್ನು ಅರಸುತ್ತ ಇಲ್ಲಿಗೆ ಹರಿದು ಬಂದ ಗಂಗಾವಳಿ ನದಿಯು ಸಮುದ್ರ ಸೇರುವುದು ಅಂಕೋಲಾ ಮತ್ತು ಕುಮಟಾ ತಾಲೂಕುಗಳ ಕಡಲತೀರದ ಸರಹದ್ದಿನಲ್ಲಿ.ಅಷ್ಟೇನೂ ವಿಶಾಲವಲ್ಲದ ಮುಖಜಭೂಮಿ ಕೂಡ ನಿರ್ಮಾಣವಾಗಿದೆ. ಮೀನುಗಾರಿಕೆಗೆ ವಿಪುಲ ಅವಕಾಶವಿದ್ದು ಅನೇಕ ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿದೆ. ಅಲ್ಲದೇ ಕೆಲವು ಊರುಗಳಲ್ಲಿ ಸಮುದ್ರದ ನೀರಿನಿಂದ ಉಪ್ಪನ್ನು ಕೂಡ ತಯಾರಿಸಲಾಗುತ್ತದೆ.ನಾನೂ ಮೊದಲು ಇದು ಮರಳಿನ ರಾಶಿಯೆಂದೇ ತಿಳಿದಿದ್ದೆ!!

ಅಂಕೋಲೆಯ ಉಪ್ಪಿನ ತಯಾರಿಕೆಗೆ ಸುಮಾರು ಇನ್ನೂರರಿಂದ ಮುನ್ನೂರು ವರ್ಷಗಳ ಇತಿಹಾಸವಿದ್ದು ಅನೇಕ ಕುಟುಂಬಗಳಿಗೆ ಆಸರೆಯಾಗಿ ನಿಂತಿದೆ. ಅಲ್ಲದೇ ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ 'ಕರ್ನಾಟಕದ ಬಾರ್ಡೋಲಿ' ಎಂದೆನಿಕೊಂಡ ಅಂಕೋಲೆ ಕರಾವಳಿ ತೀರದಲ್ಲಿಲ್ಲದಿದ್ದರೆ ಈ ಹೆಸರು ಬರುತ್ತಿರಲಿಲ್ಲವೋ ಎನೋ... ಏಕೆಂದರೆ ಅಂಕೋಲೆಯಲ್ಲಿ ಚಳುವಳಿ ಪ್ರಾರಂಭವಾದದ್ದೇ ಉಪ್ಪಿನ ಸತ್ಯಾಗ್ರಹದ ಮೂಲಕ!!

ಹೀಗೆ ಕರಾವಳಿ ಸಂಪತ್ತನ್ನು ಹೊಂದಿರುವ ಅಂಕೋಲೆಯಲ್ಲಿ ಅದು ಸಂಪೂರ್ಣವಾಗಿ ವಿನಿಯೋಗವಾಗುತ್ತಿಲ್ಲ. ಪರಿಸರಕ್ಕೆ, ಜನರಿಗೆ ಹೆಚ್ಚು ಹಾನಿಯಾಗದಂತೆ ಆಧುನೀಕತೆ ತರುವುದು ಕಷ್ಟವಾದರೂ ಸಹ ಅಸಾಧ್ಯವೇನಲ್ಲ. ಅಲ್ಲದೇ ಕೆಲ ಕಡಲತೀರಗಳು ಕಡಲ್ಗೊರೆತಕ್ಕೆ ತುತ್ತಾಗಿರುವುದರಿಂದ ಆ ತೀರಗಳಿಗೂ ಇಂದು ರಕ್ಷಣೆ ಬೇಕಿದೆ.

Monday, May 4, 2009

ಕರ್ಣಾಟಕ ಸಂಘ ಗ್ರಂಥಾಲಯ,ಗೋಕರ್ಣ

ಪ್ರತಿ ಬಾರಿ ಊರಿಗೆ ಹೋಗುವಾಗಲೂ ಆ ಬಾರಿ ಎಲ್ಲೆಲ್ಲಿ ಹೋಗಬೇಕು ಎಂಬ ಲಿಸ್ಟಂತೂ ಬ್ಯಾಗ್ ನಲ್ಲಿರುತ್ತದೆ. ಮೊನ್ನೆ ಚುನಾವಣೆ ಸಮಯದಲ್ಲಿ ಹೋದಾಗ ಕೂಡ ಗೋಕರ್ಣದಲ್ಲಿ ಕರ್ಣಾಟಕ ಸಂಘದ ಲೈಬ್ರರಿಗೆ ಒಮ್ಮೆ ಹೋಗಿ ಬರಬೇಕು ಎಂಬುದನ್ನು ನಿರ್ಧರಿಸೇ ಹೊರಟಿದ್ದೆ. ಗೋಕರ್ಣವೆಂದರೆ ಮೊದಲು ನೆನಪಿಗೆ ಬರುವುದು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ. (ಈಗೀಗ ಓಮ್ ಬೀಚ್, ಕುಡ್ಲೆ ಬೀಚ್ ಗಳ ಪ್ರಸಿದ್ಧಿ ಗೋಕರ್ಣವೊಂದು ತೀರ್ಥಕ್ಷೇತ್ರವೂ ಹೌದು ಎಂಬುದನ್ನು ಮರೆಸುತ್ತಿರುವುದು ಬೇರೆ ಮಾತು). 'ದಕ್ಷಿಣ ಕಾಶಿ' ಎಂದೇ ಪ್ರಸಿದ್ದಿ ಪಡೆದಿರುವ ಗೋಕರ್ಣ ನಮ್ಮನೆಯಿಂದ ಅಬ್ಬಬ್ಬಾ ಅಂದ್ರೆ 30 ರಿಂದ 35 ಕಿ.ಮೀ.ಗಳಷ್ಟು ದೂರದಲ್ಲಿದೆ. ಹಲವಾರು ಬಾರಿ ಆ ಕಡೆ ಹೋಗಿದ್ದರೂ ಅಲ್ಲೊಂದು ಹಳೆಯ ಗ್ರಂಥಾಲಯವಿದೆ ಎಂಬುದು ತಿಳಿದಿರಲಿಲ್ಲ. ಕೆಲವು ದಿನಗಳ ಹಿಂದೆ ಕರ್ನಾಟಕ ಗೆಝೆಟಿಯರ್ ನಲ್ಲಿ ಕರ್ನಾಟಕದ ಕೇಂದ್ರ ಗ್ರಂಥಾಲಯದ ನಂತರ ಗೋಕರ್ಣದ ಕರ್ಣಾಟಕ ಸಂಘದ ಗ್ರಂಥಾಲಯವನ್ನು ಉಲ್ಲೇಖಿಸಿದ್ದನ್ನು ನೋಡಿ ನಮ್ಮ ಗೋಕರ್ಣದಲ್ಲಿಯೂ ಉತ್ತಮ ಗ್ರಂಥಾಲಯವೊಂದಿದೆ ಎಂದು ತಿಳಿಯಿತು. ಕಾಲೇಜಿನಲ್ಲಿ ನನ್ನ ಸಹಪಾಠಿಯಾಗಿರುವ ಗೋಕರ್ಣದ ಗಣಪತಿ ಭಟ್ಟನಲ್ಲಿ ವಿಚಾರಿಸಿದಾಗ "ಹೌದು ಇದೆ. ಆದರೆ ಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಈಗ ಓದುಗರು ಬರುವುದು ಕೂಡ ಕಡಿಮೆ.ಖ್ಯಾತ ನಿರ್ದೇಶಕ ಸುನಿಲ್ ಕುಮಾರ ದೇಸಾಯಿಯವರೂ ಕೂಡ ಅಲ್ಲಿಗೆ ಬಂದು ಅನೇಕ ಹಳೆಯ ಕಾದಂಬರಿಗಳನ್ನು ಓದಿ ಹೋಗಿದ್ದಾರಂತೆ' ಎಂದು ತನ್ನ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದ.

ಮತದಾನದ ದಿನ ನನ್ನ ಹಕ್ಕನ್ನು ಚಲಾಯಿಸಿ ಗೋಕರ್ಣದ ಕಡೆಗೆ ಹೊರಟೆ. ಗೋಕರ್ಣದ ದಾರಿಯಲ್ಲೇ ಗೆಳೆಯ ಪವನನ ಮನೆಯೂ ಕೂಡ. ಅವನನ್ನು ಕರೆದುಕೊಂಡು ಗೋಕರ್ಣಕ್ಕೆ ತಲುಪಾಯಿತು. 'ತಮ್ಮ ಮನೆಯ ಮುಂದಿನ ಇನ್ನೊಂದು ಬದಿಯಲ್ಲೇ ಆ ಲೈಬ್ರರಿಯಿರುವುದು ಎಂದು ಗಣಪತಿ ಹೇಳಿ ಕಳುಹಿಸಿದ್ದು ಒಳ್ಳೆಯದೇ ಆಗಿತ್ತು. ಇಲ್ಲದಿದ್ದರೆ ಅದನ್ನು ಹುಡುಕುವುದು ಕಷ್ಟವೇ !! ಕಿರಿದಾದ ಮನೆಯ ಮಾಳಿಗೆಯ ಮೇಲೆ ಗ್ರಂಥಾಲಯವಿದೆ.ಒಳಗೆ ಹೋದೊಡನೆ ರಾಶಿ ರಾಶಿ ಪುಸ್ತಕಗಳು. 'ಗ್ರಂಥಾಲಯದಲ್ಲಿ ಪುಸ್ತಕಗಳಲ್ಲದೇ ಮತ್ತೇನನ್ನು ಕಾಣುವಿರಿ ?'  ಎಂದು ನೀವು ಕೇಳಬಹುದು. ಆದರೆ ಸಾಮಾನ್ಯವಾಗಿ ಎಲ್ಲ ಗ್ರಂಥಾಲಯಗಳಲ್ಲಿ ಓಡಾಡಲು ಸಾಕಷ್ಟು ಜಾಗವಿದ್ದು ನಿರ್ದಿಷ್ಟ ಜಾಗದಲ್ಲಿ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಜೋಡಿಸಿಟ್ಟಿರುತ್ತಾರೆ. ಆದರೆ ಇಲ್ಲಿ ಹಾಗಲ್ಲ. ಕೆಲವು ಕಪಾಟುಗಳನ್ನು ಬಿಟ್ಟರೆ ಇನ್ನು ಉಳಿದೆಡೆ ಸಿಕ್ಕ ಸಿಕ್ಕಲ್ಲಿ ಪುಸ್ತಕಗಳು. ನಾನೇನು ಈ ಗ್ರಂಥಾಲಯವನ್ನು ತೆಗಳುತ್ತಿಲ್ಲ. ಆದರೆ ಒಂದು ಕಾಲದಲ್ಲಿ 400ಕ್ಕೂ ಹೆಚ್ಚು ನಿಯತಕಾಲಿಕಗಳು ಬರುತ್ತಿದ್ದ ಗ್ರಂಥಾಲಯದ ಇಂದಿನ ಸ್ಥಿತಿಯಿದು. ಗ್ರಂಥಪಾಲಕರಾದ ಜಿ.ಎಮ್.ವೇದೇಶ್ವರರನ್ನು ಕೇಳಿದಾಗ 'ಇದೊಂದು ಖಾಸಗಿ ಲೈಬ್ರರಿ. ಹಿಂದೆಲ್ಲ ಓದುಗರ ಸಂಖ್ಯೆಯೂ ಹೆಚ್ಚಾಗಿತ್ತು. ಆದರೆ ಈಗ ಓದುಗರೂ ಕಡಿಮೆ. ಇಲ್ಲಿರುವ ಬಹುತೇಕ ಪುಸ್ತಕಗಳು ಗೌರವ ಪ್ರತಿಗಳೇ. ಇಂದಿಗೂ ಅನೇಕ ಗೌರವ ಪ್ರತಿಗಳು ಬರುತ್ತಿವೆ. ಆದರೆ ಅವುಗಳನ್ನಿಡಲು ಸ್ಥಳವೆಲ್ಲಿದೆ?ಮನೆಯಲ್ಲಿ ಇನ್ನೂ ಇಪ್ಪತ್ತರಿಂದ ಇಪ್ಪತೈದು ಕಪಾಟುಗಳಷ್ಟು ಪುಸ್ತಕಗಳಿವೆ. ಆದರೆ ಇಡಲು ಸ್ಥಳದ ಅಭಾವ. ಆದ್ದರಿಂದ ಈಗ ಗೌರವ ಪ್ರತಿಗಳನ್ನೂ ಕಳುಹಿಸುವುದು ಬೇಡ ಎಂದೇ ತಿಳಿಸಲಾಗಿದೆ !!' ಎಂದು ಹೇಳಿದರು. 

ಕಡಿಮೆಯೆಂದರೂ ಒಂದರಿಂದ ಒಂದೂವರೆ ಲಕ್ಷಗಳಷ್ಟು ಪುಸ್ತಕಗಳನ್ನು ಹೊಂದಿರುವ ಈ ಗ್ರಂಥಾಲಯದಲ್ಲಿ ಹಿಂದೆ ಉತ್ತರ ಕನ್ನಡದಿಂದ ಹೊರಡುತ್ತಿದ್ದ ಅನೇಕ ನಿಯತಕಾಲಿಕಗಳೂ ಇವೆ. ಹೆಚ್ಚಾಗಿ ಕಾದಂಬರಿ, ಸಂಸ್ಕೃತ ವಿಷಯಕ್ಕೆ  ಸಂಬಂಧಿಸಿದ ಪುಸ್ತಕಗಳು ಇಲ್ಲಿದ್ದು ಕರ್ನಾಟಕದ ಇನ್ಯಾವ ಲೈಬ್ರರಿಯಲ್ಲಿ ದೊರಕದ ಹಳೇ ಪುಸ್ತಕಗಳನ್ನು ಹೊಂದಿರುವ ಈ ಗ್ರಂಥಾಲಯದ ಕ್ಯಾಟಲೋಗ್ (ಪುಸ್ತಕಗಳ ಯಾದಿ) ರೆಕಾರ್ಡ ಪುಸ್ತಕಗಳೇ ಐವತ್ತಕ್ಕಿಂತ ಹೆಚ್ಚಿವೆ ಎಂದರೆ ಅದೆಷ್ಟು ಪುಸ್ತಕಗಳಿವೆಯೆಂದು ಅಂದಾಜಿಸಬಹುದಾಗಿದೆ. ಆದರೆ ಗ್ರಂಥಾಲಯದ ಮುಖ್ಯ ಕೊರತೆಯೆಂದರೆ ಪುಸ್ತಕದ ಯಾದಿಯ ಮೂಲಕ ಪುಸ್ತಕ ಗ್ರಂಥಾಲಯದಲ್ಲಿಯೇ ಇದೆ ಎಂಬುದು ತಿಳಿದರೂ ಅದು ಎಲ್ಲಿದೆ ? ಯಾವ ಕಪಾಟಿನಲ್ಲಿದೆ?  ಎಂಬುದನ್ನು ಹುಡುಕುವುದು ಕಷ್ಟ. ಹೀಗೆ ಹಿಂದೊಮ್ಮೆ ಕರ್ನಾಟಕದ ಮುಖ್ಯ ಗ್ರಂಥಾಲಯಗಳಲ್ಲಿ ಒಂದೆಂದು ಗುರುತಿಸಿಕೊಂಡಿದ್ದ ಗ್ರಂಥಾಲಯ ಇಂದು ಸ್ಥಳದ ಹಾಗೂ ವ್ಯವಸ್ಥೆಯ ಕೊರತೆಯಿಂದಾಗಿ ಲಕ್ಷಗಟ್ಟಲೇ ಪುಸ್ತಕಗಳು ಕಾಲಗರ್ಭದಲ್ಲಿ ಮರೆಯಾಗಲು ಸಿದ್ಧವಾಗಿವೆ. ಈ ಗ್ರಂಥಾಲಯ ಖಾಸಗಿ ಗ್ರಂಥಾಲಯವಾಗಿದ್ದರಿಂದ ಎನೋ ಸರಕಾರದ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿರಬಹುದು. ಆದರೆ 'ಪಬ್ಲಿಕ್ ಯುನಿವರ್ಸಿಟಿ' ಎಂದೇ ಕರೆಸಿಕೊಳ್ಳುವ ಇಂತಹ ಗ್ರಂಥಾಲಯಗಳನ್ನು ನವೀಕರಣಗೊಳಿಸಿದ್ದಲ್ಲಿ ಮಾತ್ರ ಜ್ಞಾನ ಪೀಳಿಗೆಯಿಂದ ಪೀಳಿಗೆಗೆ ವರ್ಗವಾಗಲು ಸಾಧ್ಯ. 

ಒಟ್ಟಿನಲ್ಲಿ ಹಳೆಯ ಲೈಬ್ರರಿಗೊಂದು ಹೋಗಿ ಬಂದ ಖುಷಿಯಿದ್ದರೂ ಮನೆಯಿಂದ ಹೊರಡುವಾಗ ಸಾಧ್ಯವಾದರೆ ನನಗೆ ಬೇಕಾದ ಕೆಲ ಪುಸ್ತಕಗಳ ಬಗ್ಗೆ ವಿಚಾರಿಸಿ ಬರಬೇಕೆಂದು ಮನಸ್ಸಿನಲ್ಲಿ ಅಂದುಕೊಂಡು ಹೋಗಿದ್ದ ನನಗೆ ಆ ಪುಸ್ತಕಗಳು ಅಲ್ಲಿದ್ದರೂ ಸಿಕ್ಕಿರಲಿಲ್ಲ.


Sunday, May 3, 2009

ಹೀಗೆರಡು ಕವನಗಳು

ಅಂದು-ಇಂದು

ಹೋರಾಟದ ನೆಲ ನಮ್ಮ ಅಂಕೋಲೆ
ಬಿಡಿಸಲು ಮುಂದಾಗಿತ್ತು ತಾಯ ಸಂಕೋಲೆ
ಊರು-ಕೇರಿಗಳಲ್ಲಿ ಹತ್ತಿತ್ತು ಸ್ವಾತಂತ್ರ್ಯ ಸಂಗ್ರಾಮದ ಕಿಡಿ
ಎಲ್ಲರ ಗುರಿಯೂ ಒಂದೇ: 'ಮಾಡು ಇಲ್ಲವೇ ಮಡಿ'.

ಇಡೀ ಕರುನಾಡಿಗೆ ಆಯಿತಿದು ಹೋರಾಟಕ್ಕೆ ಮಾದರಿ
ಯಾವ ಹಿಂಸೆಗೂ ಜನರು ಹೋಗಲಿಲ್ಲ ಚದುರಿ
ಕೊನೆಗೂ ದೇಶವಾಯಿತು ದಾಸ್ಯದಿಂದ ಮುಕ್ತಿ
ಇದಕೆ ಕಾರಣ ಜನರ ಒಗ್ಗಟ್ಟಿನಲ್ಲಿದ್ದ ಶಕ್ತಿ.

ಇಂದೆಲ್ಲಿ ಹೋಯಿತು ಅಂದಿನ ಆ ಒಗ್ಗಟ್ಟು?
ಎಲ್ಲರ ಮನಸ್ಸಿನಲ್ಲೂ ಅಧಿಕಾರದ ಪಟ್ಟು
ಪಕ್ಷಗಳಿಂದ ಜನರಲ್ಲಿ ಎದ್ದಿದೆ ಬಿರುಕು
ಇನ್ನಾದರೂ ಆಗಬೇಕು ನಾವೆಲ್ಲ ಚುರುಕು.

ಬನ್ನಿ, ಪುನಃ ಒಂದಾಗೋಣ ನಾವೆಲ್ಲ
ಜೊತೆಗೂಡಿ ತಿನ್ನೋಣ ಬೇವು-ಬೆಲ್ಲ
ಎಲ್ಲರ ಗುರಿಯೂ ಆಗಲಿ ಜನತೆಯ ಸುಖ
ಇಷ್ಟೂ ತಿಳಿಯದಿರೆ ಆತನೊಬ್ಬ ಮೂರ್ಖ.


ಕನಸು

ಮೊನ್ನೆ ಕನಸಲಿ ಆ ದೇವರು ಬಂದ
ನಿನಗಾವ ವರ ಬೇಕು ಬೇಡಿಕೊ ಎಂದ
ಬದುಕಿರುವಾಗಲೇ ಸ್ವರ್ಗವ ಕಾಣಬೇಕು, ನಾನೆಂದೆ
ದೇವರೆಂದ: ಅಂಕೋಲೆಗೆ ಹೋಗೋಣ ನಡಿ ಮುಂದೆ.

ನಾನೆಂದೆ, ಮೊದಲಿನಂತಿಲ್ಲ ಆ ನನ್ನ ತಾಯ್ನಾಡು
ನೀನೇ ಏನಾದರೂ ಪವಾಡ ಮಾಡು
ಒಂದೆಡೆ ಮ್ಯಾಂಗನೀಸ್ ಧೂಳು, ಇನ್ನೊಂದೆಡೆ ಕಾಡೂ ಬೋಳು
ಇನ್ನು ಯಾರ ಕಣ್ಣಿಗೂ ಕಾಣದ ಬಡವನ ಗೋಳು.

ದೇವರೇನು ಹೇಳಲಿಲ್ಲ, ಆತ ಸುಮ್ಮನೆ ನಕ್ಕ
ಅವನ ಆ ನಗೆಗೆ ಮ್ಯಾಂಗನೀಸ್ ಧೂಳು ಚೊಕ್ಕ
ನಿಮಿಷಮಾತ್ರದಲಿ ಬೋಳಾದ ಕಾಡಾಯಿತು ದಟ್ಟ
ಬಡವರೂ ಸ್ಥಿತಿವಂತರಾಗಿ ಸುಧಾರಿಸಿಕೊಂಡರು ತಮ್ಮ ಮಟ್ಟ.

ಆದರೆ ನಾನು ಕಂಡಿದ್ದು ಕನಸು, ನಡೆದಿರಲಿಲ್ಲ ಯಾವ ಮ್ಯಾಜಿಕ್ಕು
ನಾವೇ ಮುರಿಯಬೇಕು ಧೂಳು ಹೆಚ್ಚಿಸುವವರ ಸೊಕ್ಕು
ಕಾಡನ್ನು ಬೆಳೆಸಿ ನಾಡನ್ನು ಮಾಡಬೇಕು ಹಸಿರು
ಬಡವರ ಏಳಿಗೆಯೇ ಆಗಬೇಕು ನಮ್ಮ ಉಸಿರು.