Wednesday, December 24, 2008

ಅಂಕೋಲೆಯಲ್ಲಿ ದಿನಕರ ದೇಸಾಯಿಯವರ ಕುರಿತು ನಡೆದ ವಿಚಾರ ಸಂಕಿರಣ

ಈ ವರ್ಷ ದಿನಕರ ದೇಸಾಯಿಯವರ ಜನ್ಮ ಶತಮಾನೋತ್ಸವವೆಂದು ಹಿಂದೊಮ್ಮೆ ಬರೆದಿದ್ದೆ. ಈ ಬಾರಿ ಅದರೆ ಅಂಗವಾಗಿ ನಡೆದ ಕಾರ್ಯಕ್ರಮದ ಬಗ್ಗೆ ಬರೆಯುತ್ತಿದ್ದೇನೆ.

ಸುಮಾರು ಒಂದು ವಾರದ ಹಿಂದೆ ಅಂಕೋಲೆಗೆ ಹೋಗಿದ್ದೆ. ನನ್ನ ಪ್ರಾಯೋಗಿಕ ಪರೀಕ್ಷೆಗಳೆಲ್ಲವೂ ಸುಳಿತಾಗಿ ಆದುದ್ದರಿಂದ ಅಲ್ಲದೇ ಥೇರಿ ಪರೀಕ್ಷೆಗಳಿಗೆ ಇನ್ನೂ  2 ವಾರದ  ರಜೆ   ಇದ್ದುದರಿಂದ  ಊರಲ್ಲೇ ಓದೋಣವೆಂದು  ತಾಯ್ನಾಡಿಗೆ ಮುಖ ಮಾಡಿದ್ದೆ.  ಮನೆಗೆ ಹೋದಾಗ ತಿಳಿಯಿತು. ಕೇಂದ್ರ  ಸಾಹಿತ್ಯ ಅಕಾಡೆಮಿ ಮತ್ತು ಅಂಕೋಲೆಯ ದಿನಕರ  ದೇಸಾಯಿ ಪ್ರತಿಷ್ಠಾನ  ಸೇರಿ  ದಿನಕರ ದೇಸಾಯಿಯವರ  ಜನ್ಮಶತಮಾನೋತ್ಸವದ  ಅಂಗವಾಗಿ   ಡಿಸೆಂಬರ್ 13 ಮತ್ತು 14 ರಂದು ಅಂಕೋಲೆಯ ಸ್ವಾತಂತ್ರ್ಯ ಸಂಗ್ರಾಮ ವೇದಿಕೆಯಲ್ಲಿ ಅವರ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಿದ್ದಾರೆ ಎಂದು. ಅಲ್ಲದೇ ಆಗಾಗ ಇದರ ಬಗ್ಗೆ ಅಂಕೋಲೆಯ ಬಿ.ಬಿ.ಸಿ ಹಾಗೂ ಸಿ.ಎನ್.ಎನ್. ಗಳಂತೆ ಕಾರ್ಯನಿರ್ವಹಿಸುತ್ತಿರುವ ಆರ್ಯ ನ್ಯೂಸ್ ಮತ್ತು ಕೆನರಾ ನ್ಯೂಸ್ ಗಳಲ್ಲೂ ಪ್ರಕಟನೆ ಬರುತ್ತಿತ್ತು. 'ಹೇಗಿರುತ್ತೆ ನೋಡೋಣ'ವೆಂದು ಸಮಾಜ ಮಂದಿರದ ಮುಂದಿರುವ ಸ್ವಾತಂತ್ರ್ಯ ಸಂಗ್ರಾಮ ವೇದಿಕೆಗೆ ಹೋದೆ.




13ನೇ ತಾರೀಖು ಬೆಳಿಗ್ಗೆ ವಿಚಾರ ಸಂಕಿರಣವನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿಯವರು ಉದ್ಘಾಟಿಸಿದ್ದರು. ನಾನು ಅಲ್ಲಿಗೆ ಹೋಗಲು ಸ್ವಲ್ಪ ತಡವಾದ್ದರಿಂದ ಅದನ್ನು ನೋಡಲಾಗಲಿಲ್ಲ.ದೊರೆಸ್ವಾಮಿಯವರು ಸರಕಾರದ ನೀತಿಗಳಿಂದ ಜನಸಾಮಾನ್ಯರಿಗೆ ಅದರಲ್ಲೂ ಮುಖ್ಯವಾಗಿ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮತನಾಡಿದರಂತೆ. 
ಕಾಗೋಡು ಸತ್ಯಾಗ್ರಹದಲ್ಲಿ ಮುಂಚೂಣಿ ಹೋರಾಟಗಾರರಾಗಿದ್ದ  ಎಚ್.ಗಣಪತಿಯಪ್ಪ ನವರೂ ಇನ್ನೋರ್ವ ಅತಿಥಿಯಾಗಿ ಬಂದಿದ್ದರು.ನನಗೆ ಅವರ ಮಾತನ್ನು ಕೇಳಲು ಅವಕಾಶ ಸಿಕ್ಕಿತು. "ಈಡೀ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ದುಡಿದ ದಿನಕರ ದೇಸಾಯಿಯವರನ್ನು ಈ ಸಂದರ್ಭದಲ್ಲಿ ನೆನೆಯುವುದು ನಮ್ಮೆಲ್ಲರ ಕರ್ತವ್ಯ.ಅವರೇ ಕರ್ನಾಟಕದಲ್ಲಿ ಮೊದಲ ಬಾರಿಗೆ ಭೂಸುಧಾರಣೆಯ ಬೀಜ ಬಿತ್ತಿದ್ದು" ಎಂದರು.


ಎಚ್.ಗಣಪತಿಯಪ್ಪನವರು ಮಾತನಾಡುತ್ತಿರುವುದು

ಸುಮಾರು 57 ಗಣ್ಯರು ಈ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.ಇವರಲ್ಲಿ ಕವಿಗಳು, ಲೇಖಕರು, ವಿಮರ್ಶಕರು, ಸಂಶೋಧನಾಕಾರರು ಎಲ್ಲರೂ ಇದ್ದರು. ಪ್ರತಿಯೊಬ್ಬರೂ ದಿನಕರರು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗಳ ಬಗ್ಗೆ ಪ್ರಬಂಧವನ್ನು ಮಂಡಿಸುತ್ತಿದ್ದರು.

ಮೊದಲನೇ ದಿನ ಅಂದರೆ 13ನೇ ತಾರೀಖಿನಂದು ಜಯಂತ್ ಕಾಯ್ಕಿಣಿಯವರು ತಮ್ಮ ತಂದೆ ಗೌರೀಶ್ ಕಾಯ್ಕಿಣಿಯವರು ದಿನಕರರನ್ನು "ಜನತಾ ಕವಿ" ಎಂದು ಸಂಭೋದಿಸಿದ್ದನ್ನು ನೆನೆಯುತ್ತ ಅವರ ಅನೇಕ ಮಕ್ಕಳ ಪದ್ಯಗಳನ್ನು ಓದಿ ಅದರಲ್ಲಿದ್ದ ಸ್ವಾರಸ್ಯವನ್ನು ಹೇಳಿದರು. 'ಕರಾವಳಿ ಮುಂಜಾವು' ಪತ್ರಿಕೆಯ ಸಂಪಾದಕರಾದ ಗಂಗಾಧರ ಹೀರೆಗುತ್ತಿಯವರು "ದಿನಕರರ ಪತ್ರಿಕಾ ಬರಹ" ವಿಷಯದ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.


ದಿನಕರರ ಸಂಶೋಧನಾ ಗ್ರಂಥವಾದ "ಕಲ್ಯಾಣಿಯ ಚಾಲುಕ್ಯರ ಮಹಾಮಾಂಡಲೀಕರು" ಬಗ್ಗೆ ಸುಮತಿ ನಾಯಕರು ಮಾತನಾಡಿ ದಿನಕರರಲ್ಲಿ ಅತ್ಯುತ್ತಮ ಇತಿಹಾಸ ಸಂಶೋಧನಾಕಾರನಾಗುವ ಎಲ್ಲ ಅರ್ಹತೆಗಳೂ ಇತ್ತು ಎಂದರು.

ವಿದ್ಯಾರ್ಥಿಗಳಿಗೆ ಹಸ್ತಾಕ್ಷರ ನೀಡುತ್ತಿರುವ ಕಾಯ್ಕಿಣಿಯವರು 

ಜಿನದತ್ತ ದೇಸಾಯಿಯವರು ಮಾತನಾಡುತ್ತಿರುವುದು

ಮೊದಲನೇ ದಿನ ಇನ್ನೂ ಅನೇಕ ವಿಷಯಗಳ ಮೇಲೆ ಅಂದರೆ ಅವರ ಪ್ರವಾಸ ಕಥನ "ನಾ ಕಂಡ ಪಡುವಣ", ಅವರ ಚುಟುಕುಗಳು, ಭಾವಗೀತೆಗಳ ಕುರಿತು ವಿಚಾರಗಳು ಮಂಡಿಸಲ್ಪಟ್ಟವು.ಸಂಜೆ ಸುಮಾರು 7.30ಯಿಂದ 8.30 ವರೆಗೆ ಹೊನ್ನಾವರದ "ಚಿಂತನ" ಸಂಘದವರು "ಬೆಳಕಿನೆಡೆಗೆ" ಎಂಬ ನೀತಿನಾಟಕವನ್ನು ಆಡಿತೋರಿಸಿದರು. ಅದನ್ನು ನೋಡಿ ಊರಿಗೆ ಹೋಗುವ ಕೊನೆಯ ಬಸ್ಸಿಗೆ ಅಂದರೆ 'ಹಾಳ್ಟಿಂಗ್ ಬಸ್'ಗೆ ಹೋಗಿ ಮನೆ ಸೇರಿ ಕೊಂಡಾಗ ಸಮಯ 9.30..



"ಚಿಂತನ"  ಅಧ್ಯಯನ ಕೇಂದ್ರದವರಿಂದ ನಾಟಕ ಪ್ರದರ್ಶನ



ಮಾರನೆಯ ದಿನ ಹೆಗ್ಗೋಡಿನ ಪ್ರಸನ್ನರವರು ಅತಿಥಿಯಾಗಿ ಬಂದಿದ್ದರು.ದುಂಡಿರಾಜ್ ಇನ್ನು ಮುಂತಾದ ಚುಟುಕುಕಾರರು ಆಗಮಿಸಿದ್ದರು. 

ಸಂಜೆಯ ಸಮಾರೋಪ ಸಮರಂಭಕ್ಕೆ ಕರ್ನಾಟಕದ ಶ್ರೇಷ್ಠ ವಿಮರ್ಶಕರುಗಳಲ್ಲಿ ಒಬ್ಬರಾದ ಪ್ರೊ.ಜಿ.ಎಚ್.ನಾಯಕರು ಮತ್ತು ಅಕ್ಬರ್ ಅಲಿಯವರು ಅತಿಥಿಯಾಗಿ ಬಂದಿದ್ದರು. ಅಂಕೋಲೆಯ ಸೂರ್ವೆ(ನಮ್ಮೂರು)ಯವರಾದ ಜಿ.ಎಚ್.ನಾಯಕರು ಈಗ ಮೈಸೂರಿನಲ್ಲಿ ನೆಲಸಿದ್ದಾರೆ.ಇವರು ಮಾತನಾಡುತ್ತ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕಂದ ದಿನಕರ ಬಗ್ಗೆ ಹೇಳಿದರು.ನಾನು ಚಿಕ್ಕವನಾಗಿದ್ದಾಗಲೇ ತಂದೆಯವರು ಆಗಾಗ ಜಿ.ಎಚ್.ನಾಯಕರ ಬಗ್ಗೆ ಹೇಳುತ್ತಿದ್ದರೂ ಅವರನ್ನು ಮತ್ತು ಅವರು ಮಾತನಾಡುವುದನ್ನು ಕಂಡಿದ್ದು ಇದೇ ಮೊದಲಾಗಿತ್ತು. ಅಲ್ಲದೇ ಇವರು ನಮ್ಮೂರಿನವರು ಎಂಬುದು ಎದೆಯನ್ನು ಉಬ್ಬಿಸಿತ್ತು.


ಪ್ರೊ.ಜಿ.ಎಚ್.ನಾಯಕರು

ಅಕ್ಬರ್ ಅಲಿಯವರು ದಿನಕರರು ಕರ್ನಾಟಕದ ಏಕೀಕರಣಕ್ಕೆ ಶ್ರಮಿಸಿದುದನ್ನು ನೆನೆಸಿಕೊಂಡರು.ಸಾಹಿತ್ಯ ಅಕಾಡೆಮಿಯ ಸಂಚಾಲಕರಾದ ಸಿದ್ದಲಿಂಗಯ್ಯ ಪಟ್ಟಣಶೆಟ್ಟಿಯವರು ಎಲ್ಲ ಸಹಕಾರವನ್ನೂ ನೀಡಿ ದಿನಕರ ದೇಸಾಯಿಯವರ ಕುರಿತು ನವಭಾರತದ ನಿರ್ಮಾಪಕರ ಮಾಲಿಕೆಯಲ್ಲಿ ಪುಸ್ತಕವನ್ನೂ ಹೊರತಂದರು. ಅಲ್ಲದೇ ಬೇಕಾದ ಎಲ್ಲ ಸಹಕಾರವನ್ನು  ಮುಂದೆಯೂ ನೀಡುವುದಾಗಿ ಹೇಳಿದರು. 


ಕೊನೆಯಲ್ಲಿ ವಿಷ್ಣು ನಾಯ್ಕರು ಮಾತನಾಡುತ್ತ ಇಂದಿನ ಯುವಪೀಳಿಗೆ ಎಲ್ಲರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆಯಿತ್ತರು.



ನಾನು ಅಂಕೋಲೆಯವನಾದರೂ ನನ್ನ ಹೆಚ್ಚಿನ ವಿಧ್ಯಾಭ್ಯಾಸಗಳನ್ನೆಲ್ಲ ಮಾಡಿದ್ದು ಅಂಕೋಲೆಯ ಹೊರಗೆ. ಆದ್ದರಿಂದ ಇಲ್ಲಿನ ಸಾಹಿತಿಗಳ ಬಗ್ಗೆ ಕೇಳಿದ್ದೆ, ಓದಿದ್ದೆಯಾದರೂ ಕಂಡಿರಲಿಲ್ಲ. ಆದರೆ ಈ ಒಂದು ವಿಚಾರ ಸಂಕಿರಣ ಆ ಎಲ್ಲರನ್ನೂ ಕಾಣಲು ಅವಕಾಶವನ್ನು ಮಾಡಿಕೊಟ್ಟಿತ್ತು.ಅಂಕೋಲೆಯನ್ನು ಒಂದು ಸಾಹಿತಿಕ ಕೇಂದ್ರವನ್ನಾಗಿ ಮಾಡಿದ ಶ್ರೀ ವಿಷ್ಣು ನಾಯ್ಕರು, ದಿನಕರರ "ಜನಸೇವಕ" ಪತ್ರಿಕೆಯ ಸಂಪಾದಕರಾದ ಅಮ್ಮೆಂಬಳ ಆನಂದರು,ಅಂಕೋಲೆಯ ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರ ಬಗ್ಗೆ "ಚರಿತ್ರೆಯಲ್ಲಿ ಮರೆತವರ ಕಥೆ" ಎಂಬ ಪುಸ್ತಕ ಬರೆದು ಹಿರಿಯರ ದೇಶಪ್ರೇಮವನ್ನು ಯುವಪೀಳಿಗೆಗೆ ತಿಳಿಸುವ ಮಹೋನ್ನತ ಕಾರ್ಯವನ್ನು ಮಾಡಿದ ಶಾಂತಾರಮ ನಾಯಕರು, ಶೇಟಗೇರಿ ಯಲ್ಲಿ ವಿದ್ಯಾಸಂಸ್ಥೆಯೊಂದನ್ನು ಮುನ್ನಡೆಸಿಕೊಂಡು ಹೋಗಿ ಸಾವಿರಾರು ಜನರಿಗೆ ವಿದ್ಯಾದಾನವನ್ನು ಮಾಡಿದ ವಿ.ಜಿ.ನಾಯಕರನ್ನೆಲ್ಲ ನೋಡಿ ಮನಸ್ಸಿಗೆ ಅತೀವ ಸಂತೋಷವಾಯಿತು. ನಮ್ಮೂರಿನ ಮಾದೇವ ಮಾಸ್ತರರು  ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ನನ್ನೊಡನೆ ಇದ್ದು ಅನೇಕ ವಿಚಾರಗಳನ್ನು ಮತ್ತು ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ಇನ್ನು ಅನೇಕ ಮಹನೀಯರನ್ನು ನೋಡುವ ಅವರನ್ನು ಮಾತನಾಡಿಸುವ ಅವಕಾಶ ಸಿಕ್ಕಿತು.ಅವರು ದೇಶಕ್ಕಾಗಿ ಮತ್ತು ಜನರಿಗಾಗಿ ಮಾಡಿದ ಕೆಲಸಗಳನ್ನು ನೆನೆಯುವ ಮತ್ತು ಅದನ್ನು ಮುಂದುವರೆಸಿಕೊಂಡು ಹೋಗುವ ಭಾರ ನಮ್ಮ ಮೈಮೇಲಿದೆ.

ಬಲಬದಿಯಿಂದ ಮೂರನೇಯವರು ಎಚ್.ಎಸ್.ದೊರೆಸ್ವಾಮಿಯವರು

ಒಟ್ಟಿನಲ್ಲಿ ಪರೀಕ್ಷೆಗೆಂದು ಓದಲು ಹೋದವನಿಗೆ ಈ ವಿಚಾರಗೋಷ್ಟಿ ಜೀವನವೆಂಬ ಪರೀಕ್ಷೆಯಲ್ಲಿ ಯಾರು ಯಾವ ಯಾವ ರೀತಿಯಲ್ಲಿ ಹೋರಾದಿದ್ದರು ಎಂಬ ಹೊಸ ಜೀವನದ ಪಾಠ ಕಲಿಸಿಕೊಟ್ಟಿತು.


Thursday, December 18, 2008

ಬೆಂಗಳೂರು ಪುಸ್ತಕೋತ್ಸವ 2008


ನವೆಂಬರ್ 16ರಿಂದ 23ರವರೆಗೆ ಬೆಂಗಳೂರಿನಲ್ಲಿ ಪುಸ್ತಕೋತ್ಸವ ನಡೆಯಿತು. ಇದರ ಬಗ್ಗೆ ಹಿಂದು ದಿನಪತ್ರಿಕೆಯಲ್ಲಿ ಜಾಹಿರಾತನ್ನು ನೀಡಿದ್ದರು. ದೇಶದಲ್ಲಿ ಎರಡನೇ ಅತೀ ದೊಡ್ಡ ಈ ಪುಸಕೋತ್ಸವ. ಆದ್ದರಿಂದ ನೋಡೋಣ ಹೇಗಿರುತ್ತೆ ಬೆಂಗಳೂರಿನ ಪುಸ್ತಕೋತ್ಸವ ವೆಂದು ನೋಡಲು ನವೆಂಬರ್ 20ರಂದು ಹೋಗಿದ್ದೆ. ಈ ಪುಸ್ತಕ ಮೇಳವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿತ್ತು.






ಸುಮಾರು 250ಕ್ಕೂ ಹೆಚ್ಚು ಪ್ರಕಾಶನಗಳು, ಪುಸ್ತಕ ಮಳಿಗೆ ಗಇಲ್ಲಿ ಪಾಲ್ಗೊಂಡಿದ್ದವು. ಎಲ್ಲೆಲ್ಲೂ ಪುಸ್ತಕವೇ. ಕೆಲವೆಡೆ ಹಳೆ ಹಳೆ ಪುಸ್ತಕಗಳಾದರೇ ಇನ್ನು ಕೆಲವೆಡೆ ವಿವಿಧ ವರ್ಣಮಯ ಪುಟಗಳಿಂದ ಓದುಗರನ್ನು ಸೆಳೆಯುವ ಹೊಸ ಪುಸ್ತಕಗಳು.



ಈ ಪುಸ್ತಕೋತ್ಸವದಲ್ಲಿ ನಾನು ಗಮನಿಸಿದ ಕೆಲವು ವಿಷಯಗಳು:

* ಅನೇಕ ಸರಕಾರಿ ಅಧಿಕಾರಿಗಳು ಭಾರಿ ಸಂಖ್ಯೆಯಲ್ಲಿ ಪುಸ್ತಕವನ್ನು ಖರೀದಿಸಿದ್ದು!!!

*ಬೆಂಗಳೂರಿನಲ್ಲಿ ಕನ್ನಡ ಬಾಡುತ್ತಿದೆ ಎಂಬ ಮಾತು ಕೇಳಿ ಬಂದರೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಪುಸ್ತಕಗಳೇ ಮಾರಾಟವಾಗಿದ್ದು.

*ವಿಜಯಕರ್ನಾಟಕದಲ್ಲಿ ಪ್ರಕಟವಾಗುವ ಅಂಕಣಗಳನ್ನು ಪುಸ್ತಕವಾಗಿ ತಂದವುಗಳಿಗೆ ಭಾರಿ ಬೇಡಿಕೆ.

*ಎಲ್ಲ ಪ್ರಕಾಶನಗಳೂ ತಮ್ಮ ನಾಮಮುದ್ರೆಯಿರುವ ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಿದ್ದರೆ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇನ್ನು ಕೆಲವೇ ಪ್ರಕಾಶನಗಳು ಮಾತ್ರ  ಕಾಗದದ ಚೀಲಗಳನ್ನು ಬಳಸಿದ್ದು.

*ಕನ್ನಡ ಆಡಿಯೋ ಡಾಟ್ ಕಾಮ್ ನ ಮಳಿಗೆಯಲ್ಲಿ ಇಟ್ಟ ಕನ್ನಡದ ಬರಹವನ್ನು ಉಳ್ಳ ಟಿಶರ್ಟ್ ಎಲ್ಲರ ಗಮನ ಸೆಳೆದದ್ದು.

Sunday, November 16, 2008

ತದಡಿಯ ದಡದಲ್ಲಿ. . . .

ಕೆಲವು ತಿಂಗಳುಗಳ ಹಿಂದೆ ಕರ್ನಾಟಕದ ತುಂಬ ಸುದ್ದಿಯಲ್ಲಿದ್ದ ಸ್ಥಳವೆಂದರೆ 'ತದಡಿ'. ಕಾರಣ ಬಾರಿ ದೀಪಾವಳಿಗೆ ಅಂಕೋಲೆಗೆ  ಹೋದಾಗ ತದಡಿಗೆ ಹೋಗಿ ಬರಬೇಕೆಂಬ ಪ್ಲ್ಯಾನನ್ನು ಮಾಡಿಕೊಂಡೇ ಹೋಗಿದ್ದೆ. ತದಡಿ ನಮ್ಮ ಮನೆಯಿಂದ ಸುಮಾರು 35 ಕಿ.ಮೀ. ದೂರದಲ್ಲಿದೆ. ತದಡಿಯ ಸಮೀಪವೇ ಅಘನಾಶಿನಿ ನದಿ ಸಮುದ್ರವನ್ನು ಸೇರುವುದು. ಆದರೆ ಉತ್ತರಕನ್ನಡ ಇತರ ನದಿಗಳಂತೆ ಅಘನಾಶಿನಿ ನದಿ ಹಾಗೆ ಸಾಮಾನ್ಯವಾಗಿ ಸೇರದೇ ಸಾವಿರಾರು ಎಕರೆಗಳ ಹಿನ್ನೀರಿನ ಪ್ರದೇಶವನ್ನು ನಿರ್ಮಿಸುತ್ತದೆ. ಇದಕ್ಕೆ ಕಾರಣ ಅಘನಾಶಿನಿ ಸಮುದ್ರಕ್ಕೆ ಸೇರುವ ಜಾಗ ತುಂಬ ಚಿಕ್ಕದಾಗಿರುವುದು. ಉಪ್ಪುನೀರಿನ ಪ್ರದೇಶವನ್ನು 'ಗಜ್ನಿ ಪ್ರದೇಶ'ವೆಂದೂ ಕರೆಯುತ್ತರೆ.


ಅಘನಾಶಿನಿ ನದಿ ಅರಬ್ಬೀ ಸಮುದ್ರ ಸೇರುವ ಸ್ಥಳ


ಇದೇ ಮುಂದೆ ಸಾಣೆಕಟ್ಟಾ, ಗೋಕರ್ಣ,ಮಾದನಗೇರಿ,ಹೀರೆಗುತ್ತಿ ಇನ್ನು ಮುಂತಾದ ಊರುಗಳಲ್ಲಿ ಆವರಿಸಿಕೊಂಡಿದೆ. ಪ್ರದೇಶ ಜೀವ ವೈವಿಧ್ಯತೆಗೆ ಹೆಸರಾಗಿದ್ದು ಕರ್ನಾಟಕದ ಪ್ರಮುಖ ಮ್ಯಾಂಗ್ರೂವ್ ಕಾಡುಗಳ ತಾಣವಾಗಿದೆ.


ಸಮೀಪದ ಸಾಣಿಕಟ್ಟಾದಲ್ಲಿ ಸುಮಾರು 300 ವರ್ಷಗಳಿಂದಲೂ ಉಪ್ಪನ್ನು ಉತ್ಪಾದಿಸುತ್ತ ಬರಲಾಗಿದೆ.ಇಂದು ಇದು ನಮ್ಮ ಕರ್ನಾಟಕದ ಅತೀ ದೊಡ್ಡ ಉಪ್ಪು ತಯಾರಿಕಾ ಕೇಂದ್ರ.ಮೀನುಗಾರಿಕೆ ಇಲ್ಲಿನ ಪ್ರಮುಖ ಜೀವನೋಪಾಯವಾಗಿದ್ದು ಸುತ್ತಮುತ್ತಲಿನ ಸುಮಾರು 9000 ಜನರು ಇದರಲ್ಲಿ ತೊಡಗಿದ್ದಾರೆ.ಅಲ್ಲದೇ ವರ್ಷಕ್ಕೆ 5 ಕೋಟಿಗೂ ಹೆಚ್ಚಿನ ಆದಾಯವನ್ನು ಹೊಂದಿರುವ ಇಲ್ಲಿನ ಗಾಂವಕರ ಮೈನ್ಸ್ ಚಿಪ್ಪು ಸಂಗ್ರಹಣಾ ಕೇಂದ್ರದಲ್ಲಿ ಸಾವಿರಾರು ಜನರು ಕೆಲಸವನ್ನು ಮಾಡುತ್ತಿದ್ದಾರೆ.ಜೀವ ವೈವಿಧ್ಯತೆಯ ತಾಣವಾದ ತದಡಿಯ ಉಪ್ಪು ನೀರಿನ ಪ್ರದೇಶಕ್ಕೆ ಅನೇಕ ಪಕ್ಷಿಗಳೂ ಆಗಾಗ ವಲಸೆ ಬರುತ್ತವೆ. 'ಕಗ್ಗ' ಎಂಬ ವಿಶೇಷ ಭತ್ತದ ತಳಿಯನ್ನು ಬೆಳೆಯಲಾಗುತ್ತಿದ್ದು ಅದನ್ನು ಬೇರೆ ದೇಶಗಳಿಗೂ ರಫ್ತು ಮಾಡಲಾಗುತ್ತದೆ.1975ರಲ್ಲಿ ಅಘನಾಶಿನಿ ನದಿಯ ಉಪ್ಪುನೀರಿನ ಹಿನ್ನೀರಿನ ಪ್ರದೇಶದಲ್ಲಿ ಹಿರೇಗುತ್ತಿ ಮತ್ತು ಮಾದನಗೇರಿ ಸಮೀಪದ ಸಮೀಪದ ಸುಮಾರು 1800ಎಕರೆಗಳಷ್ಟು ಜಾಗವನ್ನು ಕಾರವಾರದ ಬಿಣಗೆಯ ಬಲ್ಲಾರ್ ಪುರ ರಾಸಾಯನಿಕ ಕಾರ್ಖಾನೆಗೆ ಉಪ್ಪು ತಯಾರಿಸಲೆಂದು ಬಿಟ್ಟು ಕೊಡಲಾಯಿತು. ಇದರಿಂದ ಅಘಾನಾಶಿನಿಯ ಜೀವಸಂಕುಲದ ಮೇಲೆ ಮತ್ತು ಇಲ್ಲಿನ ಮೀನುಗಾರಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಆಗಿನ ಸಂಸದರಾದ ಬಿ.ವಿ.ನಾಯಕರು ತಮ್ಮದೇ ಸ್ವಂಥ ದುಡ್ಡಿನಿಂದ ಕೇಸನ್ನು ಸರಕಾರದ ವಿರುದ್ಧ ದಾಖಲಿಸಿ ಪುನಃ ಜಾಗವನ್ನು ಅಲ್ಲಿನ ಜನರಿಗೆ ಕೊಡಿಸಿದರು. ತೊಂಭತ್ತರ ದಶಕದಲ್ಲಿ ತದಡಿಯಲ್ಲಿ ಹಡಗು ಒಡೆಯುವ ಕೇಂದ್ರವಿದ್ದು ಇಲ್ಲಿನ ಮ್ಯಾಂಗ್ರೂವ ಕಾಡುಗಳಿಗೆ ಮತ್ತು ಜನಜೀವನಕ್ಕೆ ಉಂಟಾಗುತ್ತಿದ್ದ ಹಾನಿಯನ್ನು ಮುಂದಿಟ್ಟು ಅದನ್ನು ಮುಚ್ಚಿಸಲಾಯಿತು.



ಮುಂದೆ 1991ರಲ್ಲಿ ಡೆನ್ಮಾರ್ಕ್ ದೇಶದ ಸಹಾಯದಿಂ 250ಮೀ ಉದ್ದದ ಬಂದರು ನಿರ್ಮಾಣದೊಂದಿಗೆ ಮೀನುಗಾರಿಕೆಯ ಆಧುನೀಕರಣಕ್ಕೂ ಹೆಚ್ಚಿನ ಒತ್ತನ್ನು ನೀಡಲಾಯಿತು. ಬಹುಷಃ ಸರಕಾರ ತದಡಿಯ ಜನಜೀವನಕ್ಕೆ ತೊಂದರೆಯಾಗದಂತೆ ಮಾಡಿದ ಕಾರ್ಯವಿದೊಂದೇ ಇರಬೇಕು.

ಅನಂತರ ಶುರುವಾಯಿತು ನೋಡಿ ಸರಕಾರದ ಪರಿಸರ ಘಾತುಕ ಯೋಚನೆಯಿಲ್ಲದ ಯೋಜನೆಗಳ ಸರಮಾಲೆ. 1996ರಲ್ಲಿ ಯಾಂತ್ರಿಕೃತ ದೋಣಿ(ಬಾರ್ಜ್) ಮೇಲೆ 4 ಶಕ್ತಿ ತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯನ್ನು ಸ್ರಕಾರ ಮುಂದಿಟ್ಟಿತು. ಆದರೆ ಯೋಜನೆಯಲ್ಲಿ ಶಕ್ತಿ ಉತ್ಪಾದನಾ ಕೇಂದ್ರಕ್ಕೆ ಬೇಕಾಗುವ ಡೀಸೆಲ್ ಸೋರಿಕೆ ಹಾಗೂ ಶಕ್ತಿ ಉತ್ಪಾದನಾ ಕೇಂದ್ರಲ್ಲಿ ಉಂಟಾದ ಶಾಖವನ್ನು ಹೊರತೆಗೆಯಲು ಅಘನಾಶಿನಿಯ ನೀರನ್ನೇ ಉಪಯೋಗಿಸುವ ಯೋಚನೆ ಇದ್ದುದರಿಂದ ಇಲ್ಲಿನ ಪರಿಸರ ಸಂತುಲನಕ್ಕೆ ಹಾನಿಯಗುವುದು ಖಾತರಿಯಾಗಿತ್ತು. ಆದ್ದರಿಂದ ಜಾಗೃತರಾದ ಜನರು ತೀವ್ರವಾಗಿ ಇದನ್ನು ವಿರೋಧಿಸಿ ಕೊನೆಗೂ 1999ರಲ್ಲಿ ಯೋಜನೆಯನ್ನು ಸರಕಾರ ಹಿಂತೆಗೆದುಕೊಳ್ಳುವಂತೆ ಮಾಡಿದರು.



ಯೋಜನೆಯನ್ನು ದಕ್ಷಿಣ ಕೋರಿಯಾದ ಕಂಪನಿಗೆ ಗುತ್ತಿಗೆಯಾಗೂ ನೀಡಿತು.ಆದರೆ ನೈಸರ್ಗಿಕ ಬಂದರಾದ ತದಡಿಯನ್ನು ವಿಸ್ತರಿಸಬೇಕಾದರೆ ಇಲ್ಲಿನ ಹಿನ್ನೀರನ ಜಾಗವನ್ನು ಆಳವಾಗಿ ತೋಡಬೇಕಾಗುತ್ತದೆ. ಅದರಿಂದ ಇಲ್ಲಿನ ಪೂರ್ಣ ಪರಿಸರದ ಸಮತೋಲನವೇ ಹೇಳ ಹೆಸರಿಲ್ಲದಂತೆ ಹಾಳಾಗಿಹೋಗುದಂತು ಖಚಿತವಾಗಿತ್ತು. ಇವೆಲ್ಲವೂ ಗೊತ್ತಿದ್ದರೂ ಸರಕಾರ ತೆಗೆದುಕೊಂಡ ಹುಂಭ ನಿರ್ಧಾರವನ್ನು ಸ್ಥಳೀಯರು ವಿರೋಧಿಸಿದರು.

ಇದೇ ಸಮಯದಲ್ಲಿ ಕರ್ನಾಟಕದ ಮುಖ್ಯ ಬಂದರಾದ ಕಾರವಾರದ ಬಂದರನ್ನು ಅಲ್ಲಿನ ಸೀಬರ್ಡ್ ವಶಕ್ಕೆ ಕೇಂದ್ರ ಸರಕಾರ ನೀಡಿದಾಗ ಸರ್ಕಾರಕ್ಕೆ ತದಡಿಯಲ್ಲಿ ಬಂದರನ್ನು ವಿಸ್ತರಿಸುವುದು ಈಗ ಅನಿವಾರ್ಯವಾಗಿದೆ.

ಅಲ್ಲದೇ ಕೇಂದ್ರ ಸರಕಾರವೂ 2020 ವೊಳಗೆ 20,000 ಮೆಗಾವಾಟ್ ಹೆಚ್ಚಿನ ಶಕ್ತಿಯನ್ನು ಉತ್ಪಾದಿಸಲು ದೇಶದಲ್ಲಿ 5 ಅಲ್ಟ್ರಾ ಮೆಗಾ ಪ್ರೊಜೆಕ್ಟ್ಗಳನ್ನು ರೂಪಿಸಿದ್ದು ಅದರಲ್ಲಿ ತದಡಿಯಲ್ಲಿ ಉಷ್ಣಸ್ಥಾವರವನ್ನು ಸ್ಥಾಪಿಸುವುದು ಒಂದಾಗಿದೆ. ಉಷ್ಣಸ್ಥಾವರ ನಿರ್ಮಿಸಲು ಕಲ್ಲಿದ್ದಲು ಅವಶ್ಯ.ಕೇಂದ್ರ ಸರಕಾರದ ಪ್ರಕಾರ ಉಷ್ಣಸ್ಥಾವರವನ್ನು ನಿರ್ಮಿಸುವ ಜಾಗದ ಹತ್ತಿರ ಕಲ್ಲಿದ್ದಲು ಗಣಿ ಇರಬೇಕೆ ಅಥವಾ ಅದನ್ನು ತರಿಸಿಕೊಳ್ಳಲು ಉತ್ತಮ ಬಂದರಿರಬೇಕು.

ಕರ್ನಾಟಕ ರಾಜ್ಯ ಸರಕಾರಕ್ಕೆ ಇಂತಹ ಅವಕಾಶವನ್ನು ಕಳೆದುಕೊಳ್ಳುವ ಆಸೆಯಿಲ್ಲ. ಅಲ್ಲದೆ ಇದರಿಂದ ಶಕ್ತಿ ಉತ್ಪಾದನೆಯಾಗುವುದರೊಂದಿಗೆ ರಾಜ್ಯಸರಕಾರ ಮೊದಲೇ ಯೋಚಿಸಿದಂತೆ ಒಂದು ಬಂದರೂ ಸಹ ನಿರ್ಮಾಣವಾಗುವುದು. ಆದರೆ ರಾಜ್ಯ ಸರಕಾರಕ್ಕೂ ಗೊತ್ತು ಇಲ್ಲಿನ ಪರಿಸರವು ಜೈವಿಕವಾಗಿ ತುಂಬ ಸೂಕ್ಷ್ಮತೆಯ ಪ್ರದೇಶವೆಂದು. ಕೊನೆಗೂ ತಾತ್ಕಾಲಿಕವಾಗಿ ಇಲ್ಲಿನ ಯೋಜನೆಯನ್ನು ಕೈಬಿಟ್ಟಿದ್ದು ಬಳ್ಳಾರಿಯಲ್ಲಿ ಹೊಸದನ್ನು ಪ್ರಾರಂಭಿಸಿದೆ.

ತದಡಿ ಯೋಜನೆಯಿಂದ ಸ್ಥಳೀಯರಿಗೆ ತುಂಬಾ ತೊಂದರೆಗಳುಂಟು.ಒಂದು ಇಲ್ಲಿ ಉಷ್ಣಸ್ಥಾವರವನ್ನು ನಿರ್ಮಿಸಿದ್ದೇ ಆದಲ್ಲಿ ಅದರಿಂದ ವರ್ಷಕ್ಕೆ ಸುಮಾರು ಹದಿನೈದು ಲಕ್ಷ ಟನ್ ಗಳಷ್ಟು ಬೂದಿಕಣಗಳು ಉತ್ಪಾದನೆಯಾಗುವುದು. ಬೂದಿಯ ಕಣಗಳು ಹಲವಾರು ವಿಕಿರಣ ಸೂಸುವ ಪದಾರ್ಥಗಳನ್ನು ಹೊಂದಿದ್ದು ಅದನ್ನು ಸರಿಯಾಗಿ ನಿರ್ವಸಹಿಸದಿದ್ದಲ್ಲಿ ಅನೇಕ ಮಾರಣಾಂತಿಕ ರೋಗಗಳಿಗೆ ಅದು ಎಡೆ ಮಾಡಿಕೊಡಬಲ್ಲದು.ಇನ್ನು ಶಾಖೋತ್ಪನ್ನ ಸ್ಥಾವರದಲ್ಲಿ ಉತ್ಪತ್ತಿಯಾಗುವ ಶಾಖವನ್ನು ತೆಗೆಯಲು ಸಮೀಪದ ಸಮುದ್ರದ ನೀರನ್ನೇ ಬಳಸುವ ವಿಚಾರವಿದ್ದು ಅಲ್ಲಿನ ಜೀವಸಂಕುಲ ಮತ್ತು ಮೀನುಗಾರಿಕೆಯ ಮೇಲೆ ಪರಿಣಾಮ ಬೀರಬಲ್ಲದು. ಯೋಜನೆಗೆ 2500 ಎಕರೆ ಜಾಗದ ಅವಶ್ಯಕತೆಯಿದ್ದು ಸರಕಾರ ಸುಮಾರು 1800 ಎಕರೆ ಪ್ರದೇಶವನ್ನು ಹೊಂದಿದ್ದು ಇನ್ನು 700 ಎಕರೆ ಜಾಗವನ್ನು ಜನರಿಂದ ಪಡೆಯಬೇಕಿದೆ.ಹೀಗೆ ಇದು ಅನೇಕ ಕುಟುಂಬಗಳ ಎತ್ತಂಗಡಿಗೂ ಕಾರಣವಾಗಬಲ್ಲುದು. ತದಡಿಯ ಯೋಜನೆಯಿಂದ ಇನ್ನೂ ಅನೇಕ ದುಷ್ಪರಿಣಾಮಗಳಿದ್ದು ಅವುಗಳನ್ನು ವಿವರಿಸುವ ವರದಿಯನ್ನು ಉತ್ತರಕನ್ನಡದ ಸ್ಥಳೀಯ ಪರಿಸರ ಸಂಘಟನೆಯೊಂದು ಇತ್ತೀಚೆಗೆ ಹೊರತಂದಿದೆ.

ಯೋಜನೆಯು ಕರ್ನಾಟಕದ ವಿದ್ಯುಚ್ಚಕ್ತಿಯ ಬೇಡಿಕೆಯನ್ನು ತಣಿಸಲು ಸಹಕಾರಿಯಾಗಬಲ್ಲುದು ಆದರೆ ಇದಕ್ಕೋಸ್ಕರ ಅತ್ಯಂತ ಮಧುರ ಭಾಂಧವ್ಯದಿಂದ ಹೊಂದಿಕೊಂಡು ಬಾಳುತ್ತಿರುವ ಜೀವಸಂಕುಲದ ಸಮತೋಲನವನ್ನು ಹಾಳುಮಾಡಿ ಇದನ್ನು ಅನುಷ್ಠಾನಗೊಳಿಸುವುದು ಸರಿಯಲ್ಲ. ಅದರ ಬದಲು ನಾವು ಅಸಂಪ್ರದಾಯಿಕ ಶಕ್ತಿ ಮೂಲಗಳ ಕಡೆಗೆ ಗಮನವನ್ನು ಹರಿಸಿ ಶಕ್ತಿ ಬೇಡಿಕೆಯನ್ನು ಪೂರೈಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ.