Wednesday, December 24, 2008

ಅಂಕೋಲೆಯಲ್ಲಿ ದಿನಕರ ದೇಸಾಯಿಯವರ ಕುರಿತು ನಡೆದ ವಿಚಾರ ಸಂಕಿರಣ

ಈ ವರ್ಷ ದಿನಕರ ದೇಸಾಯಿಯವರ ಜನ್ಮ ಶತಮಾನೋತ್ಸವವೆಂದು ಹಿಂದೊಮ್ಮೆ ಬರೆದಿದ್ದೆ. ಈ ಬಾರಿ ಅದರೆ ಅಂಗವಾಗಿ ನಡೆದ ಕಾರ್ಯಕ್ರಮದ ಬಗ್ಗೆ ಬರೆಯುತ್ತಿದ್ದೇನೆ.

ಸುಮಾರು ಒಂದು ವಾರದ ಹಿಂದೆ ಅಂಕೋಲೆಗೆ ಹೋಗಿದ್ದೆ. ನನ್ನ ಪ್ರಾಯೋಗಿಕ ಪರೀಕ್ಷೆಗಳೆಲ್ಲವೂ ಸುಳಿತಾಗಿ ಆದುದ್ದರಿಂದ ಅಲ್ಲದೇ ಥೇರಿ ಪರೀಕ್ಷೆಗಳಿಗೆ ಇನ್ನೂ  2 ವಾರದ  ರಜೆ   ಇದ್ದುದರಿಂದ  ಊರಲ್ಲೇ ಓದೋಣವೆಂದು  ತಾಯ್ನಾಡಿಗೆ ಮುಖ ಮಾಡಿದ್ದೆ.  ಮನೆಗೆ ಹೋದಾಗ ತಿಳಿಯಿತು. ಕೇಂದ್ರ  ಸಾಹಿತ್ಯ ಅಕಾಡೆಮಿ ಮತ್ತು ಅಂಕೋಲೆಯ ದಿನಕರ  ದೇಸಾಯಿ ಪ್ರತಿಷ್ಠಾನ  ಸೇರಿ  ದಿನಕರ ದೇಸಾಯಿಯವರ  ಜನ್ಮಶತಮಾನೋತ್ಸವದ  ಅಂಗವಾಗಿ   ಡಿಸೆಂಬರ್ 13 ಮತ್ತು 14 ರಂದು ಅಂಕೋಲೆಯ ಸ್ವಾತಂತ್ರ್ಯ ಸಂಗ್ರಾಮ ವೇದಿಕೆಯಲ್ಲಿ ಅವರ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಿದ್ದಾರೆ ಎಂದು. ಅಲ್ಲದೇ ಆಗಾಗ ಇದರ ಬಗ್ಗೆ ಅಂಕೋಲೆಯ ಬಿ.ಬಿ.ಸಿ ಹಾಗೂ ಸಿ.ಎನ್.ಎನ್. ಗಳಂತೆ ಕಾರ್ಯನಿರ್ವಹಿಸುತ್ತಿರುವ ಆರ್ಯ ನ್ಯೂಸ್ ಮತ್ತು ಕೆನರಾ ನ್ಯೂಸ್ ಗಳಲ್ಲೂ ಪ್ರಕಟನೆ ಬರುತ್ತಿತ್ತು. 'ಹೇಗಿರುತ್ತೆ ನೋಡೋಣ'ವೆಂದು ಸಮಾಜ ಮಂದಿರದ ಮುಂದಿರುವ ಸ್ವಾತಂತ್ರ್ಯ ಸಂಗ್ರಾಮ ವೇದಿಕೆಗೆ ಹೋದೆ.
13ನೇ ತಾರೀಖು ಬೆಳಿಗ್ಗೆ ವಿಚಾರ ಸಂಕಿರಣವನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿಯವರು ಉದ್ಘಾಟಿಸಿದ್ದರು. ನಾನು ಅಲ್ಲಿಗೆ ಹೋಗಲು ಸ್ವಲ್ಪ ತಡವಾದ್ದರಿಂದ ಅದನ್ನು ನೋಡಲಾಗಲಿಲ್ಲ.ದೊರೆಸ್ವಾಮಿಯವರು ಸರಕಾರದ ನೀತಿಗಳಿಂದ ಜನಸಾಮಾನ್ಯರಿಗೆ ಅದರಲ್ಲೂ ಮುಖ್ಯವಾಗಿ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮತನಾಡಿದರಂತೆ. 
ಕಾಗೋಡು ಸತ್ಯಾಗ್ರಹದಲ್ಲಿ ಮುಂಚೂಣಿ ಹೋರಾಟಗಾರರಾಗಿದ್ದ  ಎಚ್.ಗಣಪತಿಯಪ್ಪ ನವರೂ ಇನ್ನೋರ್ವ ಅತಿಥಿಯಾಗಿ ಬಂದಿದ್ದರು.ನನಗೆ ಅವರ ಮಾತನ್ನು ಕೇಳಲು ಅವಕಾಶ ಸಿಕ್ಕಿತು. "ಈಡೀ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ದುಡಿದ ದಿನಕರ ದೇಸಾಯಿಯವರನ್ನು ಈ ಸಂದರ್ಭದಲ್ಲಿ ನೆನೆಯುವುದು ನಮ್ಮೆಲ್ಲರ ಕರ್ತವ್ಯ.ಅವರೇ ಕರ್ನಾಟಕದಲ್ಲಿ ಮೊದಲ ಬಾರಿಗೆ ಭೂಸುಧಾರಣೆಯ ಬೀಜ ಬಿತ್ತಿದ್ದು" ಎಂದರು.


ಎಚ್.ಗಣಪತಿಯಪ್ಪನವರು ಮಾತನಾಡುತ್ತಿರುವುದು

ಸುಮಾರು 57 ಗಣ್ಯರು ಈ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.ಇವರಲ್ಲಿ ಕವಿಗಳು, ಲೇಖಕರು, ವಿಮರ್ಶಕರು, ಸಂಶೋಧನಾಕಾರರು ಎಲ್ಲರೂ ಇದ್ದರು. ಪ್ರತಿಯೊಬ್ಬರೂ ದಿನಕರರು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗಳ ಬಗ್ಗೆ ಪ್ರಬಂಧವನ್ನು ಮಂಡಿಸುತ್ತಿದ್ದರು.

ಮೊದಲನೇ ದಿನ ಅಂದರೆ 13ನೇ ತಾರೀಖಿನಂದು ಜಯಂತ್ ಕಾಯ್ಕಿಣಿಯವರು ತಮ್ಮ ತಂದೆ ಗೌರೀಶ್ ಕಾಯ್ಕಿಣಿಯವರು ದಿನಕರರನ್ನು "ಜನತಾ ಕವಿ" ಎಂದು ಸಂಭೋದಿಸಿದ್ದನ್ನು ನೆನೆಯುತ್ತ ಅವರ ಅನೇಕ ಮಕ್ಕಳ ಪದ್ಯಗಳನ್ನು ಓದಿ ಅದರಲ್ಲಿದ್ದ ಸ್ವಾರಸ್ಯವನ್ನು ಹೇಳಿದರು. 'ಕರಾವಳಿ ಮುಂಜಾವು' ಪತ್ರಿಕೆಯ ಸಂಪಾದಕರಾದ ಗಂಗಾಧರ ಹೀರೆಗುತ್ತಿಯವರು "ದಿನಕರರ ಪತ್ರಿಕಾ ಬರಹ" ವಿಷಯದ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.


ದಿನಕರರ ಸಂಶೋಧನಾ ಗ್ರಂಥವಾದ "ಕಲ್ಯಾಣಿಯ ಚಾಲುಕ್ಯರ ಮಹಾಮಾಂಡಲೀಕರು" ಬಗ್ಗೆ ಸುಮತಿ ನಾಯಕರು ಮಾತನಾಡಿ ದಿನಕರರಲ್ಲಿ ಅತ್ಯುತ್ತಮ ಇತಿಹಾಸ ಸಂಶೋಧನಾಕಾರನಾಗುವ ಎಲ್ಲ ಅರ್ಹತೆಗಳೂ ಇತ್ತು ಎಂದರು.

ವಿದ್ಯಾರ್ಥಿಗಳಿಗೆ ಹಸ್ತಾಕ್ಷರ ನೀಡುತ್ತಿರುವ ಕಾಯ್ಕಿಣಿಯವರು 

ಜಿನದತ್ತ ದೇಸಾಯಿಯವರು ಮಾತನಾಡುತ್ತಿರುವುದು

ಮೊದಲನೇ ದಿನ ಇನ್ನೂ ಅನೇಕ ವಿಷಯಗಳ ಮೇಲೆ ಅಂದರೆ ಅವರ ಪ್ರವಾಸ ಕಥನ "ನಾ ಕಂಡ ಪಡುವಣ", ಅವರ ಚುಟುಕುಗಳು, ಭಾವಗೀತೆಗಳ ಕುರಿತು ವಿಚಾರಗಳು ಮಂಡಿಸಲ್ಪಟ್ಟವು.ಸಂಜೆ ಸುಮಾರು 7.30ಯಿಂದ 8.30 ವರೆಗೆ ಹೊನ್ನಾವರದ "ಚಿಂತನ" ಸಂಘದವರು "ಬೆಳಕಿನೆಡೆಗೆ" ಎಂಬ ನೀತಿನಾಟಕವನ್ನು ಆಡಿತೋರಿಸಿದರು. ಅದನ್ನು ನೋಡಿ ಊರಿಗೆ ಹೋಗುವ ಕೊನೆಯ ಬಸ್ಸಿಗೆ ಅಂದರೆ 'ಹಾಳ್ಟಿಂಗ್ ಬಸ್'ಗೆ ಹೋಗಿ ಮನೆ ಸೇರಿ ಕೊಂಡಾಗ ಸಮಯ 9.30.."ಚಿಂತನ"  ಅಧ್ಯಯನ ಕೇಂದ್ರದವರಿಂದ ನಾಟಕ ಪ್ರದರ್ಶನಮಾರನೆಯ ದಿನ ಹೆಗ್ಗೋಡಿನ ಪ್ರಸನ್ನರವರು ಅತಿಥಿಯಾಗಿ ಬಂದಿದ್ದರು.ದುಂಡಿರಾಜ್ ಇನ್ನು ಮುಂತಾದ ಚುಟುಕುಕಾರರು ಆಗಮಿಸಿದ್ದರು. 

ಸಂಜೆಯ ಸಮಾರೋಪ ಸಮರಂಭಕ್ಕೆ ಕರ್ನಾಟಕದ ಶ್ರೇಷ್ಠ ವಿಮರ್ಶಕರುಗಳಲ್ಲಿ ಒಬ್ಬರಾದ ಪ್ರೊ.ಜಿ.ಎಚ್.ನಾಯಕರು ಮತ್ತು ಅಕ್ಬರ್ ಅಲಿಯವರು ಅತಿಥಿಯಾಗಿ ಬಂದಿದ್ದರು. ಅಂಕೋಲೆಯ ಸೂರ್ವೆ(ನಮ್ಮೂರು)ಯವರಾದ ಜಿ.ಎಚ್.ನಾಯಕರು ಈಗ ಮೈಸೂರಿನಲ್ಲಿ ನೆಲಸಿದ್ದಾರೆ.ಇವರು ಮಾತನಾಡುತ್ತ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕಂದ ದಿನಕರ ಬಗ್ಗೆ ಹೇಳಿದರು.ನಾನು ಚಿಕ್ಕವನಾಗಿದ್ದಾಗಲೇ ತಂದೆಯವರು ಆಗಾಗ ಜಿ.ಎಚ್.ನಾಯಕರ ಬಗ್ಗೆ ಹೇಳುತ್ತಿದ್ದರೂ ಅವರನ್ನು ಮತ್ತು ಅವರು ಮಾತನಾಡುವುದನ್ನು ಕಂಡಿದ್ದು ಇದೇ ಮೊದಲಾಗಿತ್ತು. ಅಲ್ಲದೇ ಇವರು ನಮ್ಮೂರಿನವರು ಎಂಬುದು ಎದೆಯನ್ನು ಉಬ್ಬಿಸಿತ್ತು.


ಪ್ರೊ.ಜಿ.ಎಚ್.ನಾಯಕರು

ಅಕ್ಬರ್ ಅಲಿಯವರು ದಿನಕರರು ಕರ್ನಾಟಕದ ಏಕೀಕರಣಕ್ಕೆ ಶ್ರಮಿಸಿದುದನ್ನು ನೆನೆಸಿಕೊಂಡರು.ಸಾಹಿತ್ಯ ಅಕಾಡೆಮಿಯ ಸಂಚಾಲಕರಾದ ಸಿದ್ದಲಿಂಗಯ್ಯ ಪಟ್ಟಣಶೆಟ್ಟಿಯವರು ಎಲ್ಲ ಸಹಕಾರವನ್ನೂ ನೀಡಿ ದಿನಕರ ದೇಸಾಯಿಯವರ ಕುರಿತು ನವಭಾರತದ ನಿರ್ಮಾಪಕರ ಮಾಲಿಕೆಯಲ್ಲಿ ಪುಸ್ತಕವನ್ನೂ ಹೊರತಂದರು. ಅಲ್ಲದೇ ಬೇಕಾದ ಎಲ್ಲ ಸಹಕಾರವನ್ನು  ಮುಂದೆಯೂ ನೀಡುವುದಾಗಿ ಹೇಳಿದರು. 


ಕೊನೆಯಲ್ಲಿ ವಿಷ್ಣು ನಾಯ್ಕರು ಮಾತನಾಡುತ್ತ ಇಂದಿನ ಯುವಪೀಳಿಗೆ ಎಲ್ಲರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆಯಿತ್ತರು.ನಾನು ಅಂಕೋಲೆಯವನಾದರೂ ನನ್ನ ಹೆಚ್ಚಿನ ವಿಧ್ಯಾಭ್ಯಾಸಗಳನ್ನೆಲ್ಲ ಮಾಡಿದ್ದು ಅಂಕೋಲೆಯ ಹೊರಗೆ. ಆದ್ದರಿಂದ ಇಲ್ಲಿನ ಸಾಹಿತಿಗಳ ಬಗ್ಗೆ ಕೇಳಿದ್ದೆ, ಓದಿದ್ದೆಯಾದರೂ ಕಂಡಿರಲಿಲ್ಲ. ಆದರೆ ಈ ಒಂದು ವಿಚಾರ ಸಂಕಿರಣ ಆ ಎಲ್ಲರನ್ನೂ ಕಾಣಲು ಅವಕಾಶವನ್ನು ಮಾಡಿಕೊಟ್ಟಿತ್ತು.ಅಂಕೋಲೆಯನ್ನು ಒಂದು ಸಾಹಿತಿಕ ಕೇಂದ್ರವನ್ನಾಗಿ ಮಾಡಿದ ಶ್ರೀ ವಿಷ್ಣು ನಾಯ್ಕರು, ದಿನಕರರ "ಜನಸೇವಕ" ಪತ್ರಿಕೆಯ ಸಂಪಾದಕರಾದ ಅಮ್ಮೆಂಬಳ ಆನಂದರು,ಅಂಕೋಲೆಯ ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರ ಬಗ್ಗೆ "ಚರಿತ್ರೆಯಲ್ಲಿ ಮರೆತವರ ಕಥೆ" ಎಂಬ ಪುಸ್ತಕ ಬರೆದು ಹಿರಿಯರ ದೇಶಪ್ರೇಮವನ್ನು ಯುವಪೀಳಿಗೆಗೆ ತಿಳಿಸುವ ಮಹೋನ್ನತ ಕಾರ್ಯವನ್ನು ಮಾಡಿದ ಶಾಂತಾರಮ ನಾಯಕರು, ಶೇಟಗೇರಿ ಯಲ್ಲಿ ವಿದ್ಯಾಸಂಸ್ಥೆಯೊಂದನ್ನು ಮುನ್ನಡೆಸಿಕೊಂಡು ಹೋಗಿ ಸಾವಿರಾರು ಜನರಿಗೆ ವಿದ್ಯಾದಾನವನ್ನು ಮಾಡಿದ ವಿ.ಜಿ.ನಾಯಕರನ್ನೆಲ್ಲ ನೋಡಿ ಮನಸ್ಸಿಗೆ ಅತೀವ ಸಂತೋಷವಾಯಿತು. ನಮ್ಮೂರಿನ ಮಾದೇವ ಮಾಸ್ತರರು  ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ನನ್ನೊಡನೆ ಇದ್ದು ಅನೇಕ ವಿಚಾರಗಳನ್ನು ಮತ್ತು ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ಇನ್ನು ಅನೇಕ ಮಹನೀಯರನ್ನು ನೋಡುವ ಅವರನ್ನು ಮಾತನಾಡಿಸುವ ಅವಕಾಶ ಸಿಕ್ಕಿತು.ಅವರು ದೇಶಕ್ಕಾಗಿ ಮತ್ತು ಜನರಿಗಾಗಿ ಮಾಡಿದ ಕೆಲಸಗಳನ್ನು ನೆನೆಯುವ ಮತ್ತು ಅದನ್ನು ಮುಂದುವರೆಸಿಕೊಂಡು ಹೋಗುವ ಭಾರ ನಮ್ಮ ಮೈಮೇಲಿದೆ.

ಬಲಬದಿಯಿಂದ ಮೂರನೇಯವರು ಎಚ್.ಎಸ್.ದೊರೆಸ್ವಾಮಿಯವರು

ಒಟ್ಟಿನಲ್ಲಿ ಪರೀಕ್ಷೆಗೆಂದು ಓದಲು ಹೋದವನಿಗೆ ಈ ವಿಚಾರಗೋಷ್ಟಿ ಜೀವನವೆಂಬ ಪರೀಕ್ಷೆಯಲ್ಲಿ ಯಾರು ಯಾವ ಯಾವ ರೀತಿಯಲ್ಲಿ ಹೋರಾದಿದ್ದರು ಎಂಬ ಹೊಸ ಜೀವನದ ಪಾಠ ಕಲಿಸಿಕೊಟ್ಟಿತು.


5 comments:

ತೇಜಸ್ವಿನಿ ಹೆಗಡೆ- said...

"ಚುಟುಕುಗಳ ಬ್ರಹ್ಮ" ದಿನಕರ ದೇಸಾಯಿಯವರು ನನ್ನ ಅಚ್ಚುಮೆಚ್ಚಿನ ಕವಿಗಳಲ್ಲೋರ್ವರು. ಅವರ ಕವನವಾದ "ಎನ್ನ ದೇಹದ ಬೂದಿ.."ಕವನ ನನಗೆ ಬಲು ಇಷ್ಟ. ಸದ್ಯವೇ ಈ ಕವನವನ್ನು ನಾನು ಬ್ಲಾಗ್‌ನಲ್ಲಿ ಹಾಕಲಿರುವೆ.

ಉತ್ತಮ ಮಹಿತಿಗಳೊಂದೊಗೆ, ಸಚಿತ್ರವಾಗಿರುವ ಲೇಖನ ಚೆನ್ನಾಗಿದೆ.

ಪ್ರಮೋದ ನಾಯಕ said...

ಧನ್ಯವಾದಗಳು.

ರಾಜೇಶ್ ನಾಯ್ಕ said...

ಎಂಥಾ ಒಳ್ಳೆಯ ರಿಪೋರ್ಟ್ ಕೊಟ್ಟಿದ್ದೀರಿ ಮಾರಾಯ್ರೆ!ಪರೀಕ್ಷೆಗೆ ಓದಲು ಹೋಗಿ ಇಲ್ಲೆಲ್ಲಾ ಕಾಲಹರಣ ಮಾಡುವುದೇ? ಅಂದ ಹಾಗೆ ಪರೀಕ್ಷೆ ಹೇಗಾಯಿತು?

vishwanath sunkasal said...

ಪ್ರಮೋದ್, ತುಂಬಾ ಖುಶಿ ಆಯ್ತು ನಿಮ್ಮ ಬ್ಲೊಗ್ ನೋಡಿ. ಅಚ್ಚುಕಟ್ಟಾಗಿ ಮಾಡಿದ್ದೀರಿ. ಹೀಗೇ ಬರೀತಾ ಇರಿ.
ಅಂದ ಹಾಗೆ ನನ್ನ ಗುರುತು ಸಿಕ್ಕಿತೋ...?
ವಿಶ್ವನಾಥ ಸುಂಕಸಾಳ, ಕರಾವಳಿ ಮುಂಜಾವಿನಲ್ಲಿ "ವಕ್ರೋಕ್ತಿ" ಎಂಬ ಅನ್ಕಣವನ್ನು ಬರೀತಿದ್ದೇನೆ.

ಪ್ರಮೋದ ನಾಯಕ said...

ಗೊತ್ತಾಯಿತು. ನೀವಲ್ಲಿ ವಿ.ಸುಂಕಸಾಳ ಎಂದು ಬರೀತೀರಲ್ಲ? ಬೆಂಗಳೂರಿಗೆ ಬಂದ ಮೇಲೆ ನಮ್ಮ ಕರಾವಳಿ ಮುಂಜಾವು, ಜನಾಂತರಂಗ ಪತ್ರಿಕೆಗಳ ಟಚ್ಚೇ ತಪ್ಪಿಹೋಗಿದೆ. :(