Friday, January 2, 2009

ಚರಿತ್ರೆಯಲ್ಲಿ ಮರೆತವರ ಕಥೆ

ಅಂಕೋಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಬರೆಯಬೇಕು ಎಂದೆಣೆಸಿಕೊಂಡರೂ ಕಾಲ ಕೂಡಿ ಬಂದಿರಲಿಲ್ಲ. ನಿಜವಾಗಿ ಹೇಳಬೇಕೆಂದರೆ ನನಗೂ ನಮ್ಮ ಅಂಕೋಲೆಯಲ್ಲಿ ಸ್ವಾತಂತ್ರ್ಯ ಹೋರಾಟ ವೀರೋಚಕವಾಗಿ ನಡೆದಿತ್ತು ಎಂಬ ವಿಷಯ ಬಿಟ್ಟರೆ ಬೇರೇನೂ ಹೆಚ್ಚಿಗೆ ತಿಳಿದಿರಲಿಲ್ಲ .ನಾನು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ಆಗಿನ ಸಮಾಜ ವಿಜ್ಞಾನದ ಪುಸ್ತಕದಲ್ಲಿ ಇದ್ದ "ಅಂಕೋಲಾ, ಶಿರಸಿ ಮತ್ತು ಸಿದ್ದಾಪುರಗಳಲ್ಲಿ ಉಪ್ಪಿನ ಸತ್ಯಾಗ್ರಹವು ನಡೆದಿತ್ತು" ಎಂಬ ವಾಕ್ಯ ಇನ್ನೂ ಆಗಾಗ ಮನಸ್ಸಿನ ಕಣ್ಮುಂದೆ ಸುಳಿಯುತ್ತಿರುತ್ತದೆ. ಅದನ್ನು ಬಿಟ್ಟರೆ ತಂದೆಯವರು ಕೆಲವೊಮ್ಮೆ ಊರಿನ ಹಿರಿಯರ ಹೆಸರುಗಳನ್ನು ಹೇಳಿ ಇವರೆಲ್ಲ ಈ ರೀತಿ ಹೋರಾಡಿದ್ದರಂತೆ ಎಂದು ಹೇಳುತ್ತಿದ್ದರು.ಇಷ್ಟನ್ನೂ ಬಿಟ್ಟರೆ ನನಗೆ ಅಂಕೋಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಈ ಹೋರಾಟದ ಬಗ್ಗೆ ಹಿಚ್ಕಡ ಶಾಂತಾರಾಮ ನಾಯಕರು "ಚರಿತ್ರೆಯಲ್ಲಿ ಮರೆತವರ ಕಥೆ" ಎಂಬ ಪುಸ್ತಕವೊಂದನ್ನು ಬರೆದಿದ್ದಾರೆ ಎಂದು ನಮ್ಮ ಪಿ.ಯು. ಕಾಲೇಜಿನ ಹಬ್ಬು ಅವರು ಹೇಳಿದಾಗ ಅದನ್ನು ಓದಲು ಮನಸಾಗಿ ಅದನ್ನು ಹೇಗೋ ಹುಡುಕಿ ಓದಲು ಕುಳಿತೆ. ನೀವು ಇಂದೂ ಅಂಕೋಲೆಗೆ ಬಂದರೆ ಅಲ್ಲಲ್ಲಿ "ಸ್ವಾತಂತ್ರ್ಯ", "ಸಂಗ್ರಾಮ" ಮುಂತಾದ ಪದಗಳನ್ನು ಎತ್ತಿ ಹಿಡಿಯುವ ಅನೇಕ ಕಟ್ಟಡಗಳನ್ನು ನೋಡಬಹುದು. ಸ್ವಾತಂತ್ರ್ಯ ಸಂಗ್ರಾಮ ವೇದಿಕೆ, ಸತ್ಯಾಗ್ರಹ ಸ್ಮಾರಕ, ಗಾಂಧಿ ಮೈದಾನ, ಕ್ರಾಂತಿ ಮೈದಾನ ಹೀಗೆ ನಡೆದ ಹೋರಾಟದ ಅನೇಕ ನೆನಪುಗಳನ್ನು ತಮ್ಮ ಒಡಲಿನಲ್ಲಿಟ್ಟುಕೊಂಡು ಕಲ್ಲಾಗಿ ನಿಂತಿರೋ ಅದೆಷ್ಟೋ ಕುರುಹುಗಳು ಇಂದಿಗೂ ಅಂಕೋಲೆಯಲ್ಲಿವೆ.1995ರಲ್ಲೇ ಬಿಡುಗಡೆಯಾದ ಈ ಪುಸ್ತಕವನ್ನು ಓದುತ್ತಿದ್ದ ರಾತ್ರಿಯಂತೂ ನಾನೂ 1930-40ರ ದಶಕದಲ್ಲೇ ಇದ್ದೇನೋ ಎಂಬಂತೆ ಅನಿಸುತ್ತಿತ್ತು . ಆ ರೀತಿ ಇದ್ದವು ನಡೆದ ಘಟನೆಗಳು ಮತ್ತು ಅದನ್ನು ಪರಿಪರಿಯಾಗಿ ಬಿಚ್ಚಿಟ್ಟ ರೀತಿ. ನಾಡವರು, ಒಕ್ಕಲಿಗರು,ಕೊಂಕಣಿಗರು ಹೀಗೆ ಎಲ್ಲರೂ ಸೇರಿ ಒಗ್ಗಟ್ಟಾಗಿ ಹೋರಾಡಿದ್ದನ್ನು ಒದುತ್ತಿದ್ದರೆ ಮೈ ಝುಮ್ ಎನ್ನುತ್ತಿತ್ತು. ಬ್ರಿಟಿಷರಿಗೆ ಸತಾಯಿಸಿದ ರೀತಿ, ನಂತರ ಅವರಿಂದ ತಪ್ಪಿಸಿಕೊಳ್ಳಲು ಹೋಡಿದ ಉಪಾಯಗಳು ಮತ್ತು ಆ ಸಂದರ್ಭದಲ್ಲಿ ನಡೆದ ಘಟನೆಗಳು ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ನಾಯಕರು ಬರಿದಿದ್ದಾರೆ.


ಚಿತ್ರ ಕೃಪೆ:http://www.kamat.com/

ಈ ಪುಸ್ತಕವನ್ನು ಓದುತ್ತಿದ್ದರೆ ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಗಂಗಾವಳಿಯ ಮೇಲೆ ಹೆಮ್ಮೆ ಎನಿಸುತ್ತಿತ್ತು.ಗಂಗಾವಳಿ ನದಿಯೂ ಅನೇಕ ಬಾರಿ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಸಹಾಯಮಾಡಿತ್ತು . ಗಂಗಾವಳಿ ನದಿಯ ಎಕ್ಕೆಲ ಬದಿಗಳಲ್ಲಿ ಇರುವ ಎಲ್ಲ ಹಳ್ಳಿಗಳೂ ಈ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವು. ಸೂರ್ವೆಯಲ್ಲಿರುವ ಕಲಶ ದೇವಸ್ಥಾನ, ಉಳುವರೆಯ ತಾರಿ, ಹಿಚ್ಕಡ ಆ ಗುಡ್ಡಗಳು ಇವೆಲ್ಲವೂ ನಡೆದ ಇತಿಹಾಸಕ್ಕೆ ಇನ್ನೂ ಮೂಕ ಪ್ರೇಕ್ಷಕರಂತೆ ನಿಂತಿವೆ.ಅದೆಷ್ಟೋ ಸಾವಿರಾರು ಜನರು ಇಲ್ಲಿ ಹೋರಾಡಿದರೂ ಅನೇಕರು ಇತಿಹಾಸದ ಪುಟಗಳಲ್ಲಿ ಮಾಯವಾಗಿದ್ದಾರೆ. ಅಂತಹವರೆಲ್ಲರನ್ನೂ ಈಗಿನ ಯುವ ಪೀಳೀಗೆಗೆ ಪರಿಚಯಿಸಿ ಕೊಡುವ ಒಳ್ಳೆಯ ಕಾರ್ಯವನ್ನು ಮಾನ್ಯ ನಾಯಕರು ಈ ಪುಸ್ತಕದ ಮೂಲಕ ಮಾಡಿದ್ದಾರೆ. ಅಂಕೋಲೆಯಲ್ಲಿ ನಡೆದ ಈ ಹೋರಾಟದ ಕುರಿತು ಹೇಳುವ ಇನ್ನೂ ಎರಡು ಮೂರು ಪುಸ್ತಕಗಳು ಇವೆ ಎಂದು ತಿಳಿದುಬಂದಿದ್ದು ಸದ್ಯ ಅವನ್ನೆಲ್ಲ ಹುಡುಕುತ್ತಿದ್ದು ಒಂದು ವೇಳೆ ಅವೇನಾದರೂ ಸಿಕ್ಕರೆ ಅದರೆ ಬಗ್ಗೆ ಇನ್ನೊಮ್ಮೆ ಬರೆವೆ.

No comments: