Sunday, November 16, 2008

ತದಡಿಯ ದಡದಲ್ಲಿ. . . .

ಕೆಲವು ತಿಂಗಳುಗಳ ಹಿಂದೆ ಕರ್ನಾಟಕದ ತುಂಬ ಸುದ್ದಿಯಲ್ಲಿದ್ದ ಸ್ಥಳವೆಂದರೆ 'ತದಡಿ'. ಕಾರಣ ಬಾರಿ ದೀಪಾವಳಿಗೆ ಅಂಕೋಲೆಗೆ  ಹೋದಾಗ ತದಡಿಗೆ ಹೋಗಿ ಬರಬೇಕೆಂಬ ಪ್ಲ್ಯಾನನ್ನು ಮಾಡಿಕೊಂಡೇ ಹೋಗಿದ್ದೆ. ತದಡಿ ನಮ್ಮ ಮನೆಯಿಂದ ಸುಮಾರು 35 ಕಿ.ಮೀ. ದೂರದಲ್ಲಿದೆ. ತದಡಿಯ ಸಮೀಪವೇ ಅಘನಾಶಿನಿ ನದಿ ಸಮುದ್ರವನ್ನು ಸೇರುವುದು. ಆದರೆ ಉತ್ತರಕನ್ನಡ ಇತರ ನದಿಗಳಂತೆ ಅಘನಾಶಿನಿ ನದಿ ಹಾಗೆ ಸಾಮಾನ್ಯವಾಗಿ ಸೇರದೇ ಸಾವಿರಾರು ಎಕರೆಗಳ ಹಿನ್ನೀರಿನ ಪ್ರದೇಶವನ್ನು ನಿರ್ಮಿಸುತ್ತದೆ. ಇದಕ್ಕೆ ಕಾರಣ ಅಘನಾಶಿನಿ ಸಮುದ್ರಕ್ಕೆ ಸೇರುವ ಜಾಗ ತುಂಬ ಚಿಕ್ಕದಾಗಿರುವುದು. ಉಪ್ಪುನೀರಿನ ಪ್ರದೇಶವನ್ನು 'ಗಜ್ನಿ ಪ್ರದೇಶ'ವೆಂದೂ ಕರೆಯುತ್ತರೆ.


ಅಘನಾಶಿನಿ ನದಿ ಅರಬ್ಬೀ ಸಮುದ್ರ ಸೇರುವ ಸ್ಥಳ


ಇದೇ ಮುಂದೆ ಸಾಣೆಕಟ್ಟಾ, ಗೋಕರ್ಣ,ಮಾದನಗೇರಿ,ಹೀರೆಗುತ್ತಿ ಇನ್ನು ಮುಂತಾದ ಊರುಗಳಲ್ಲಿ ಆವರಿಸಿಕೊಂಡಿದೆ. ಪ್ರದೇಶ ಜೀವ ವೈವಿಧ್ಯತೆಗೆ ಹೆಸರಾಗಿದ್ದು ಕರ್ನಾಟಕದ ಪ್ರಮುಖ ಮ್ಯಾಂಗ್ರೂವ್ ಕಾಡುಗಳ ತಾಣವಾಗಿದೆ.


ಸಮೀಪದ ಸಾಣಿಕಟ್ಟಾದಲ್ಲಿ ಸುಮಾರು 300 ವರ್ಷಗಳಿಂದಲೂ ಉಪ್ಪನ್ನು ಉತ್ಪಾದಿಸುತ್ತ ಬರಲಾಗಿದೆ.ಇಂದು ಇದು ನಮ್ಮ ಕರ್ನಾಟಕದ ಅತೀ ದೊಡ್ಡ ಉಪ್ಪು ತಯಾರಿಕಾ ಕೇಂದ್ರ.ಮೀನುಗಾರಿಕೆ ಇಲ್ಲಿನ ಪ್ರಮುಖ ಜೀವನೋಪಾಯವಾಗಿದ್ದು ಸುತ್ತಮುತ್ತಲಿನ ಸುಮಾರು 9000 ಜನರು ಇದರಲ್ಲಿ ತೊಡಗಿದ್ದಾರೆ.ಅಲ್ಲದೇ ವರ್ಷಕ್ಕೆ 5 ಕೋಟಿಗೂ ಹೆಚ್ಚಿನ ಆದಾಯವನ್ನು ಹೊಂದಿರುವ ಇಲ್ಲಿನ ಗಾಂವಕರ ಮೈನ್ಸ್ ಚಿಪ್ಪು ಸಂಗ್ರಹಣಾ ಕೇಂದ್ರದಲ್ಲಿ ಸಾವಿರಾರು ಜನರು ಕೆಲಸವನ್ನು ಮಾಡುತ್ತಿದ್ದಾರೆ.ಜೀವ ವೈವಿಧ್ಯತೆಯ ತಾಣವಾದ ತದಡಿಯ ಉಪ್ಪು ನೀರಿನ ಪ್ರದೇಶಕ್ಕೆ ಅನೇಕ ಪಕ್ಷಿಗಳೂ ಆಗಾಗ ವಲಸೆ ಬರುತ್ತವೆ. 'ಕಗ್ಗ' ಎಂಬ ವಿಶೇಷ ಭತ್ತದ ತಳಿಯನ್ನು ಬೆಳೆಯಲಾಗುತ್ತಿದ್ದು ಅದನ್ನು ಬೇರೆ ದೇಶಗಳಿಗೂ ರಫ್ತು ಮಾಡಲಾಗುತ್ತದೆ.1975ರಲ್ಲಿ ಅಘನಾಶಿನಿ ನದಿಯ ಉಪ್ಪುನೀರಿನ ಹಿನ್ನೀರಿನ ಪ್ರದೇಶದಲ್ಲಿ ಹಿರೇಗುತ್ತಿ ಮತ್ತು ಮಾದನಗೇರಿ ಸಮೀಪದ ಸಮೀಪದ ಸುಮಾರು 1800ಎಕರೆಗಳಷ್ಟು ಜಾಗವನ್ನು ಕಾರವಾರದ ಬಿಣಗೆಯ ಬಲ್ಲಾರ್ ಪುರ ರಾಸಾಯನಿಕ ಕಾರ್ಖಾನೆಗೆ ಉಪ್ಪು ತಯಾರಿಸಲೆಂದು ಬಿಟ್ಟು ಕೊಡಲಾಯಿತು. ಇದರಿಂದ ಅಘಾನಾಶಿನಿಯ ಜೀವಸಂಕುಲದ ಮೇಲೆ ಮತ್ತು ಇಲ್ಲಿನ ಮೀನುಗಾರಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಆಗಿನ ಸಂಸದರಾದ ಬಿ.ವಿ.ನಾಯಕರು ತಮ್ಮದೇ ಸ್ವಂಥ ದುಡ್ಡಿನಿಂದ ಕೇಸನ್ನು ಸರಕಾರದ ವಿರುದ್ಧ ದಾಖಲಿಸಿ ಪುನಃ ಜಾಗವನ್ನು ಅಲ್ಲಿನ ಜನರಿಗೆ ಕೊಡಿಸಿದರು. ತೊಂಭತ್ತರ ದಶಕದಲ್ಲಿ ತದಡಿಯಲ್ಲಿ ಹಡಗು ಒಡೆಯುವ ಕೇಂದ್ರವಿದ್ದು ಇಲ್ಲಿನ ಮ್ಯಾಂಗ್ರೂವ ಕಾಡುಗಳಿಗೆ ಮತ್ತು ಜನಜೀವನಕ್ಕೆ ಉಂಟಾಗುತ್ತಿದ್ದ ಹಾನಿಯನ್ನು ಮುಂದಿಟ್ಟು ಅದನ್ನು ಮುಚ್ಚಿಸಲಾಯಿತು.ಮುಂದೆ 1991ರಲ್ಲಿ ಡೆನ್ಮಾರ್ಕ್ ದೇಶದ ಸಹಾಯದಿಂ 250ಮೀ ಉದ್ದದ ಬಂದರು ನಿರ್ಮಾಣದೊಂದಿಗೆ ಮೀನುಗಾರಿಕೆಯ ಆಧುನೀಕರಣಕ್ಕೂ ಹೆಚ್ಚಿನ ಒತ್ತನ್ನು ನೀಡಲಾಯಿತು. ಬಹುಷಃ ಸರಕಾರ ತದಡಿಯ ಜನಜೀವನಕ್ಕೆ ತೊಂದರೆಯಾಗದಂತೆ ಮಾಡಿದ ಕಾರ್ಯವಿದೊಂದೇ ಇರಬೇಕು.

ಅನಂತರ ಶುರುವಾಯಿತು ನೋಡಿ ಸರಕಾರದ ಪರಿಸರ ಘಾತುಕ ಯೋಚನೆಯಿಲ್ಲದ ಯೋಜನೆಗಳ ಸರಮಾಲೆ. 1996ರಲ್ಲಿ ಯಾಂತ್ರಿಕೃತ ದೋಣಿ(ಬಾರ್ಜ್) ಮೇಲೆ 4 ಶಕ್ತಿ ತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯನ್ನು ಸ್ರಕಾರ ಮುಂದಿಟ್ಟಿತು. ಆದರೆ ಯೋಜನೆಯಲ್ಲಿ ಶಕ್ತಿ ಉತ್ಪಾದನಾ ಕೇಂದ್ರಕ್ಕೆ ಬೇಕಾಗುವ ಡೀಸೆಲ್ ಸೋರಿಕೆ ಹಾಗೂ ಶಕ್ತಿ ಉತ್ಪಾದನಾ ಕೇಂದ್ರಲ್ಲಿ ಉಂಟಾದ ಶಾಖವನ್ನು ಹೊರತೆಗೆಯಲು ಅಘನಾಶಿನಿಯ ನೀರನ್ನೇ ಉಪಯೋಗಿಸುವ ಯೋಚನೆ ಇದ್ದುದರಿಂದ ಇಲ್ಲಿನ ಪರಿಸರ ಸಂತುಲನಕ್ಕೆ ಹಾನಿಯಗುವುದು ಖಾತರಿಯಾಗಿತ್ತು. ಆದ್ದರಿಂದ ಜಾಗೃತರಾದ ಜನರು ತೀವ್ರವಾಗಿ ಇದನ್ನು ವಿರೋಧಿಸಿ ಕೊನೆಗೂ 1999ರಲ್ಲಿ ಯೋಜನೆಯನ್ನು ಸರಕಾರ ಹಿಂತೆಗೆದುಕೊಳ್ಳುವಂತೆ ಮಾಡಿದರು.ಯೋಜನೆಯನ್ನು ದಕ್ಷಿಣ ಕೋರಿಯಾದ ಕಂಪನಿಗೆ ಗುತ್ತಿಗೆಯಾಗೂ ನೀಡಿತು.ಆದರೆ ನೈಸರ್ಗಿಕ ಬಂದರಾದ ತದಡಿಯನ್ನು ವಿಸ್ತರಿಸಬೇಕಾದರೆ ಇಲ್ಲಿನ ಹಿನ್ನೀರನ ಜಾಗವನ್ನು ಆಳವಾಗಿ ತೋಡಬೇಕಾಗುತ್ತದೆ. ಅದರಿಂದ ಇಲ್ಲಿನ ಪೂರ್ಣ ಪರಿಸರದ ಸಮತೋಲನವೇ ಹೇಳ ಹೆಸರಿಲ್ಲದಂತೆ ಹಾಳಾಗಿಹೋಗುದಂತು ಖಚಿತವಾಗಿತ್ತು. ಇವೆಲ್ಲವೂ ಗೊತ್ತಿದ್ದರೂ ಸರಕಾರ ತೆಗೆದುಕೊಂಡ ಹುಂಭ ನಿರ್ಧಾರವನ್ನು ಸ್ಥಳೀಯರು ವಿರೋಧಿಸಿದರು.

ಇದೇ ಸಮಯದಲ್ಲಿ ಕರ್ನಾಟಕದ ಮುಖ್ಯ ಬಂದರಾದ ಕಾರವಾರದ ಬಂದರನ್ನು ಅಲ್ಲಿನ ಸೀಬರ್ಡ್ ವಶಕ್ಕೆ ಕೇಂದ್ರ ಸರಕಾರ ನೀಡಿದಾಗ ಸರ್ಕಾರಕ್ಕೆ ತದಡಿಯಲ್ಲಿ ಬಂದರನ್ನು ವಿಸ್ತರಿಸುವುದು ಈಗ ಅನಿವಾರ್ಯವಾಗಿದೆ.

ಅಲ್ಲದೇ ಕೇಂದ್ರ ಸರಕಾರವೂ 2020 ವೊಳಗೆ 20,000 ಮೆಗಾವಾಟ್ ಹೆಚ್ಚಿನ ಶಕ್ತಿಯನ್ನು ಉತ್ಪಾದಿಸಲು ದೇಶದಲ್ಲಿ 5 ಅಲ್ಟ್ರಾ ಮೆಗಾ ಪ್ರೊಜೆಕ್ಟ್ಗಳನ್ನು ರೂಪಿಸಿದ್ದು ಅದರಲ್ಲಿ ತದಡಿಯಲ್ಲಿ ಉಷ್ಣಸ್ಥಾವರವನ್ನು ಸ್ಥಾಪಿಸುವುದು ಒಂದಾಗಿದೆ. ಉಷ್ಣಸ್ಥಾವರ ನಿರ್ಮಿಸಲು ಕಲ್ಲಿದ್ದಲು ಅವಶ್ಯ.ಕೇಂದ್ರ ಸರಕಾರದ ಪ್ರಕಾರ ಉಷ್ಣಸ್ಥಾವರವನ್ನು ನಿರ್ಮಿಸುವ ಜಾಗದ ಹತ್ತಿರ ಕಲ್ಲಿದ್ದಲು ಗಣಿ ಇರಬೇಕೆ ಅಥವಾ ಅದನ್ನು ತರಿಸಿಕೊಳ್ಳಲು ಉತ್ತಮ ಬಂದರಿರಬೇಕು.

ಕರ್ನಾಟಕ ರಾಜ್ಯ ಸರಕಾರಕ್ಕೆ ಇಂತಹ ಅವಕಾಶವನ್ನು ಕಳೆದುಕೊಳ್ಳುವ ಆಸೆಯಿಲ್ಲ. ಅಲ್ಲದೆ ಇದರಿಂದ ಶಕ್ತಿ ಉತ್ಪಾದನೆಯಾಗುವುದರೊಂದಿಗೆ ರಾಜ್ಯಸರಕಾರ ಮೊದಲೇ ಯೋಚಿಸಿದಂತೆ ಒಂದು ಬಂದರೂ ಸಹ ನಿರ್ಮಾಣವಾಗುವುದು. ಆದರೆ ರಾಜ್ಯ ಸರಕಾರಕ್ಕೂ ಗೊತ್ತು ಇಲ್ಲಿನ ಪರಿಸರವು ಜೈವಿಕವಾಗಿ ತುಂಬ ಸೂಕ್ಷ್ಮತೆಯ ಪ್ರದೇಶವೆಂದು. ಕೊನೆಗೂ ತಾತ್ಕಾಲಿಕವಾಗಿ ಇಲ್ಲಿನ ಯೋಜನೆಯನ್ನು ಕೈಬಿಟ್ಟಿದ್ದು ಬಳ್ಳಾರಿಯಲ್ಲಿ ಹೊಸದನ್ನು ಪ್ರಾರಂಭಿಸಿದೆ.

ತದಡಿ ಯೋಜನೆಯಿಂದ ಸ್ಥಳೀಯರಿಗೆ ತುಂಬಾ ತೊಂದರೆಗಳುಂಟು.ಒಂದು ಇಲ್ಲಿ ಉಷ್ಣಸ್ಥಾವರವನ್ನು ನಿರ್ಮಿಸಿದ್ದೇ ಆದಲ್ಲಿ ಅದರಿಂದ ವರ್ಷಕ್ಕೆ ಸುಮಾರು ಹದಿನೈದು ಲಕ್ಷ ಟನ್ ಗಳಷ್ಟು ಬೂದಿಕಣಗಳು ಉತ್ಪಾದನೆಯಾಗುವುದು. ಬೂದಿಯ ಕಣಗಳು ಹಲವಾರು ವಿಕಿರಣ ಸೂಸುವ ಪದಾರ್ಥಗಳನ್ನು ಹೊಂದಿದ್ದು ಅದನ್ನು ಸರಿಯಾಗಿ ನಿರ್ವಸಹಿಸದಿದ್ದಲ್ಲಿ ಅನೇಕ ಮಾರಣಾಂತಿಕ ರೋಗಗಳಿಗೆ ಅದು ಎಡೆ ಮಾಡಿಕೊಡಬಲ್ಲದು.ಇನ್ನು ಶಾಖೋತ್ಪನ್ನ ಸ್ಥಾವರದಲ್ಲಿ ಉತ್ಪತ್ತಿಯಾಗುವ ಶಾಖವನ್ನು ತೆಗೆಯಲು ಸಮೀಪದ ಸಮುದ್ರದ ನೀರನ್ನೇ ಬಳಸುವ ವಿಚಾರವಿದ್ದು ಅಲ್ಲಿನ ಜೀವಸಂಕುಲ ಮತ್ತು ಮೀನುಗಾರಿಕೆಯ ಮೇಲೆ ಪರಿಣಾಮ ಬೀರಬಲ್ಲದು. ಯೋಜನೆಗೆ 2500 ಎಕರೆ ಜಾಗದ ಅವಶ್ಯಕತೆಯಿದ್ದು ಸರಕಾರ ಸುಮಾರು 1800 ಎಕರೆ ಪ್ರದೇಶವನ್ನು ಹೊಂದಿದ್ದು ಇನ್ನು 700 ಎಕರೆ ಜಾಗವನ್ನು ಜನರಿಂದ ಪಡೆಯಬೇಕಿದೆ.ಹೀಗೆ ಇದು ಅನೇಕ ಕುಟುಂಬಗಳ ಎತ್ತಂಗಡಿಗೂ ಕಾರಣವಾಗಬಲ್ಲುದು. ತದಡಿಯ ಯೋಜನೆಯಿಂದ ಇನ್ನೂ ಅನೇಕ ದುಷ್ಪರಿಣಾಮಗಳಿದ್ದು ಅವುಗಳನ್ನು ವಿವರಿಸುವ ವರದಿಯನ್ನು ಉತ್ತರಕನ್ನಡದ ಸ್ಥಳೀಯ ಪರಿಸರ ಸಂಘಟನೆಯೊಂದು ಇತ್ತೀಚೆಗೆ ಹೊರತಂದಿದೆ.

ಯೋಜನೆಯು ಕರ್ನಾಟಕದ ವಿದ್ಯುಚ್ಚಕ್ತಿಯ ಬೇಡಿಕೆಯನ್ನು ತಣಿಸಲು ಸಹಕಾರಿಯಾಗಬಲ್ಲುದು ಆದರೆ ಇದಕ್ಕೋಸ್ಕರ ಅತ್ಯಂತ ಮಧುರ ಭಾಂಧವ್ಯದಿಂದ ಹೊಂದಿಕೊಂಡು ಬಾಳುತ್ತಿರುವ ಜೀವಸಂಕುಲದ ಸಮತೋಲನವನ್ನು ಹಾಳುಮಾಡಿ ಇದನ್ನು ಅನುಷ್ಠಾನಗೊಳಿಸುವುದು ಸರಿಯಲ್ಲ. ಅದರ ಬದಲು ನಾವು ಅಸಂಪ್ರದಾಯಿಕ ಶಕ್ತಿ ಮೂಲಗಳ ಕಡೆಗೆ ಗಮನವನ್ನು ಹರಿಸಿ ಶಕ್ತಿ ಬೇಡಿಕೆಯನ್ನು ಪೂರೈಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ.

3 comments:

shriguru said...

Useful.Very useful. keep writing such things man.

ಪ್ರಮೋದ ನಾಯಕ said...

thanks.

GURUPRASAD said...

tumba chennagide.... espetially pada sanyojane....