Thursday, November 6, 2008

ಮನದಂಗಳದಲ್ಲಿ ಪ್ರಕಾಶಿಸುತ್ತಿರುವ ದಿನಕರರು


ಈ ನವೆಂಬರ್ 6ರಂದು 'ಚುಟುಕು ಬ್ರಹ್ಮ'ರೆಂದೇ ಖ್ಯಾತರಾದ ದಿನಕರ ದೇಸಾಯಿಯವರು ನಮ್ಮನ್ನಗಲಿ 26 ವರ್ಷಗಳಾಯಿತು. ದಿನಕರ ದೇಸಾಯಿಯವರು ನಮ್ಮ ಇಡೀ ಉತ್ತರ ಕನ್ನಡ ಜಿಲ್ಲೆಗೆ 'ದಿನಕರ'ನಾಗಿ ಬೆಳಗಿದವರು. ಹಿಂದಿನಿಂದಲೂ 'ಹಿಂದುಳಿದ ಜಿಲ್ಲೆ' ಎಂಬ ಹಣೆಪಟ್ಟಿಯನ್ನೇ ಕಟ್ಟಿಕೊಂಡು ಬಂದಿರುವ ಜಿಲ್ಲೆಯಲ್ಲಿ ಶಿಕ್ಷಣ ಕ್ರಾಂತಿಯನ್ನು ಆರಂಭಿಸಿದವರು.

1901ರ ಸಪ್ಟೆಂಬರ್ 10ರಂದು ಅಂಕೋಲೆಯ ಹೊನ್ನೆಕೇರಿಯಲ್ಲಿ ಜನಿಸಿದ ದಿನಕರರು ತಮ್ಮ ಶಿಕ್ಷಣವನ್ನು ಅಲಗೇರಿ(ಮೂಲ ಊರು),ಅಂಕೋಲೆ, ಕಾರವಾರ,ಬೆಂಗಳೂರು,ಮೈಸೂರು ಮತ್ತು ಮುಂಬಯಿಯಲ್ಲಿ ಮುಗಿಸಿದರು. 1934ರಲ್ಲಿ ಮುಂಬಯಿ ಯುನಿವರ್ಸಿಟಿಯಿಂದ ಎಲ್.ಎಲ್.ಬಿ.ಪಡೆದ ಇವರು ಗೋಖಲೆಯವರ 'ಸರ್ವಂಟ್ಸ್ ಆಫ್ ಇಂಡಿಯಾ' ಸೇರುವುದರ ಮೂಲಕ ಸಮಾಜ ಸೇವೆಗೆ ಕಾಲಿಟ್ಟರು. 1936 ಜುಲೈ 2 ರಂದು ತೀರಾ ಬಡ ಕುಟುಂಬದ ಇಂದಿರಾ ವಾಗಳೆಯವರನ್ನು ರಜಿಸ್ಟಾರ ಮದುವೆಯಾದರು. ತಮ್ಮ ಮದುವೆಯನ್ನು ಕೇವಲ 13 ರೂಪಾಯಿಗಳಲ್ಲಿ ಮುಗಿಸಿ ಅನಾವಶ್ಯಕ ಖರ್ಚನ್ನು ತಪ್ಪಿಸುವಂತೆ ಜನರಿಗೆ ತಿಳಿಹೇಳಿದವರು ದಿನಕರರು.

'ಪ್ರೈಮರಿ ಎಜ್ಯುಕೇಷನ್ ಇನ್ ಇಂಡಿಯಾ', ಟುವರ್ಡ್ಸ್ ಲಿಟರರಿ ಬಾಂಬೇ' ಪುಸ್ತಕಗಳನ್ನು ಬರೆದ ಇವರು 1940 ರಲ್ಲಿ ತಮ್ಮ ತಾಯ್ನಾಡಾದ ಉತ್ತರಕನ್ನಡದಲ್ಲಿ ರೈತರ ಸಮಸ್ಯೆಗಳನ್ನು ಕೊನೆಗಾಣಿಸಲು ರೈತ ಕೂಟವನ್ನು ಸ್ಥಾಪಿಸಿದರು. 1948 ರಲ್ಲಿ ಮುಂಬಯಿ ಮಹಾನಗರ ಪಾಲಿಕೆಯ ಸದಸ್ಯರಾಗಿ ಅಲ್ಲಿನ ಜನಮನ್ನಣೆಯನ್ನೂ ಗಳಿಸಿದರು.1949ರಲ್ಲಿ 'ರೈತರ ಹಾಡುಗಳು', 1950 ರಲ್ಲಿ 'ಕವನ ಸಂಗ್ರಹ' ಮತ್ತು 1951ರಲ್ಲಿ 'ಮಕ್ಕಳ ಗೀತೆಗಳು' ಎಂಬ ಪುಸ್ತಕಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಕೊಡುಗೆಯನ್ನು ನೀಡಿದರು. ರೈತರ ಮೇಲೆ ಅಪಾರ ಪ್ರೇಮವನ್ನು ಹೊಂದಿದ ಇವರು ಬಡ ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾದುದನ್ನು ಕಂಡು 1953ರಲ್ಲಿ ಇವರು 'ಕೆನರಾ ವೆಲ್ ಫೆರ್ ಟ್ರಸ್ಟ್' ಅನ್ನು ಪ್ರಾರಂಭಿಸಿದರು. ಇಂದು ಈ ಸಂಸ್ಥೆ ಸುಮಾರು ಮೂವತ್ತೆಂಟು ಶಾಲಾ-ಕಾಲೇಜುಗಳನ್ನು ಹೊಂದಿದೆ. ಈ ಸಂಸ್ಥೆಯ ಅನೇಕ ಹೈಸ್ಕೂಲುಗಳಿಗೆ 'ಜನತ ವಿದ್ಯಾಲಯ' ವೆಂದು ಹೆಸರಿಟ್ಟಿರುವುದು ಜನರ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ.ಇಂದೂ ಸಹ ಬಡಜನರಿಗೆ ಶುಲ್ಕ ವಿನಾಯಿತಿಯನ್ನು ಟ್ರಸ್ಟಿನ ಶಾಲಾ-ಕಾಲೇಜುಗಳಲ್ಲಿ ನೀಡಲಾಗುತ್ತದೆ.1955 ರಲ್ಲಿ ಜನಜಾಗೃತಿಗಾಗಿ 'ಜನಸೇವಕ' ಎಂಬ ವಾರಪತ್ರಿಕೆಯನ್ನು ಅಮ್ಮೆಂಬಳ ಆನಂದರ ಸಂಪಾದಕತ್ವದಲ್ಲಿ ಪ್ರಾರಂಭಿಸಿದರು. ಜನರ ಅನೇಕ ಸಮಸ್ಯೆಗಳ ಧ್ವನಿಯಾದ ಈ ಪತ್ರಿಕೆ ಸತತ 16 ವರ್ಷಗಳ ಕಾಲ ಜನರ ಸೇವೆ ಸಲ್ಲಿಸಿತು.ಈ ಪತ್ರಿಕೆಗೆ ಮಾನ್ಯ ಗೌರೀಶ್ ಕಾಯ್ಕಿಣಿಯವರೂ ಅಂಕಣವನ್ನು ಬರೆಯುತ್ತಿದ್ದರು.


ಅಂಕೋಲೆಯ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕೆ ಬೇರೆ ತಾಲೂಕಿಗೆ ಹೋಗಬೇಕಾಗಿದ್ದ ಸಮಯದಲ್ಲಿ ದಿನಕರರು 1966ರಲ್ಲಿ ಗೋಖಲೆ ಸೆಂಟೆನರಿ ಕಾಲೇಜನ್ನು ಪ್ರಾರಂಭಿಸಿದರು. 1967ರಲ್ಲಿ ಲೋಕಸಭೆಯ ಸದಸ್ಯರಾದ ಇವರು ಕ್ಷೇತ್ರದ ಅನೇಕ ಸಮಸ್ಯೆಗಳನ್ನು ನಿವಾರಿಸಿದರು. ತಮ್ಮ ಜೀವನದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಚುಟುಕಗಳನ್ನು ರಚಿಸಿದ ದಿನಕರರು 1978ರಲ್ಲಿ 'ದಿನಕರನ ಚೌಪದಿ' ಗ್ರಂಥವನ್ನು ಪ್ರಕಟಿಸಿದರು. ಈ ಗ್ರಂಥಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಅವರಿಗೆ ಲಭಿಸಿತು. ತಮ್ಮ ವರಮಾನ ಮತ್ತು ಅನೇಕ ಪ್ರಶಸ್ತಿಗಳೊಡನೆ ದೊರೆತ ಹಣವನ್ನು ಜನರ ಸೇವೆಗಾಗಿ ನೀಡಿದ ಇವರು 1982ರ ನವೆಂಬರ್ 6ರಂದು ಕೊನೆಯುಸಿರೆಳೆದರು.

ಇಂತಹ ವ್ಯಕ್ತಿತ್ವದ ದಿನಕರ ದೇಸಾಯಿಯವರ ನಮ್ಮ ಅಂಕೋಲೆಯವರು ಎಂದು ಹೇಳಲು ತುಂಬ ಹೆಮ್ಮೆಯಾಗುತ್ತಿದೆ. ಅಂಕೋಲೆಯಿಂದ ದೂರವಾಗಿಯೇ ನಾನು ಬೆಳೆದರೂ ಚಿಕ್ಕಂದಿನಿಂದಲೂ ನಾನು ಅವರ ಹೆಸರನ್ನೇ ಕೇಳಿ ಬೆಳೆದವನು. ನಮ್ಮ ತಂದೆಯವರು ದಿನಕರರ ಬಗ್ಗೆ ಆಗಾಗ ಹೇಳುತ್ತಿದ್ದರು. ಅವರೂ ಸಹ ದಿನಕರರ ಜಿ.ಸಿ.ಕಾಲೇಜಿನಲ್ಲೇ ಕಲಿತವರು. ಪ್ರಾಥಮಿಕ ಶಾಲೆಯಲ್ಲಿರುವಾಗ ತಂದೆಯವರು ದಿನಕರರ ಕರಿತಾದ ಪುಸ್ತಕವನ್ನು ತಂದು ಕೊಟ್ಟಿದ್ದ ನೆನಪು ಇನ್ನೂ ಮಾಸದೇ ಹಾಗೇ ಅಚ್ಚಳಿಯದಂತೆ ಮನದಲ್ಲಿದೆ. ಐದನೇ ಅಥವಾ ಆರನೆಯ ತರಗತಿಯಲ್ಲಿ ನಮಗೆ ಅವರ ನಾಲ್ಕು ಚುಟುಕುಗಳು ಸಹ ಪಠ್ಯದಲ್ಲಿದ್ದವು.

'ತಿಪ್ಪಭಟ್ಟರ ಚಂದ ಕೊಡೆ
ಸಾವಿರ ತೂತು ಎಲ್ಲ ಕಡೆ
ಮಳೆನೀರೆಲ್ಲ ಒಳಗಡೆಗೆ

ಭಟ್ಟರು ಮಿಂದರು ಕೊಡೆಯೊಳಗೆ'

ಎಂಬ ಚುಟುಕನ್ನು ನಮ್ಮಮ್ಮ ಚಿಕ್ಕಂದಿನಲ್ಲೇ ಹೇಳಿಕೊಟ್ಟಿದ್ದರೂ ಅದು ದಿನಕರ ರಚನೆ ಎಂದು ಕೆಲವು ದಿನಗಳ ಹಿಂದೆಯಷ್ಟೆ. ಅತ್ಯಮೋಘ ಅಂತ್ಯಪ್ರಾಸಗಳಿಂದ ಕೂಡಿದ ಆ ಚುಟುಕಗಳನ್ನು ಕೇಳುವಾಗ ಮನಸ್ಸಿಗೆ ಆಗುವ ಸಂತೋಷವೇ ಬೇರೆ. ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಅಂಕೋಲೆಯಲ್ಲಿ ಕಲಿಯುವ ಅದೃಷ್ಟವಿರದ ನನಗೆ ನನ್ನ ಕಾಲೇಜು ಶಿಕ್ಷಣವನ್ನು ದಿನಕರರ ಜಿ.ಸಿ.ಕಾಲೇಜಿನಲ್ಲಿ ಕಲಿಯುವ ಸೌಭಾಘ್ಯ ಒಲಿದು ಬಂದಿತ್ತು. ಅವರ ಮುಖಚಿತ್ರವಿರುವ ಪ್ರಶಸ್ತಿಪತ್ರ ನನಗೆ ಅತೀ ಖುಷಿಕೊಟ್ಟ 'ಪ್ರೈಜು'. ದಿನಕರರನ್ನು ಕಾಣಲು ಆಗಲಿಲ್ಲ ಎಂಬ ಅಳಲು ಮನಸ್ಸಲ್ಲಿದ್ದು ಅವರನ್ನು ಅವರು ಕಟ್ಟಿದ ಶೈಕ್ಷಣಿಕ ಸಂಸ್ಥೆಗಳ ಮೂಲಕ ಕಾಣಬೇಕಾದ ಅನಿವಾರ್ಯತೆ ಉಂಟಾಗಿದೆ. ಇಂತಹ ಮಹಾವ್ಯಕ್ತಿ ವಾಸಿಸಿದ ಭೂಮಿಯಿಂದ, ಉಸಿರಾಡಿದ ಗಾಳಿಯಿಂದ ನಾನು ದೂರವಾಗಿರುವುದು ನಿಜಕ್ಕೂ ಖೇದವೆನಿಸುತ್ತಿದೆ.
ಇಂತಹ ಮಹಾವ್ಯಕ್ತಿಯ, ಬಡಜನರ ಅಭ್ಯುದಯಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟ ದಿನಕರರು ಈ ಲೋಕವನ್ನು ತ್ಯಜಿಸಿ ಭೌತಿಕವಾಗಿ ಅಸ್ತಂಗತವಾದರೂ ಸಹ ನಮ್ಮ ಮನಗಳಲ್ಲಿ ಸದಾ ಪ್ರಖರವಾಗಿ ಪ್ರಕಾಶಿಸುತ್ತಿರುವ ದಿನಕರರಿಗೆ ಕೋಟಿ ನಮನ.

No comments: