Friday, October 17, 2008

ವಿಕಿಮ್ಯಾಪಿಯಾ ಎನ್ನುವ ಬ್ರಹ್ಮಾಸ್ತ್ರ


ನಾನು ಕರಾವಳಿ ಮತ್ತು ಪಶ್ಚಿಮಘಟ್ಟಗಳೆರಡನ್ನೂ ಹೊಂದಿದ ಕರ್ನಾಟಕದ ಬಾರ್ಡೋಲಿ ಅಂಕೋಲೆಯವನಾದರೂ ನನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದ್ದು ಸಮೀಪದ ಕಾರವಾರದ ಕೆರವಡಿಯಲ್ಲಿ.ಕೆರವಡಿ ಕಾರವಾರದಿಂದ ಸುಮಾರು ಮೂವತ್ನಾಲ್ಕು ಕಿ.ಮೀ ದೂರದಲ್ಲಿದ್ದು ಕಾಳಿ ನದಿಯ ಎಡ ದಂಡೆಯ ಮೇಲಿದೆ. ಆದ್ದರಿಂದ ಬೇಸಿಗೆ ರಜೆಯಲ್ಲಿ ಮತ್ತು ದಸರಾ ರಜೆಯಲ್ಲಿ ಮಾತ್ರವೇ ನಮ್ಮೂರಿಗೆ ಬರಲು ಸಾಧ್ಯವಾಗುತ್ತಿತ್ತು. ನನಗೆ ಅಂಕೋಲೆಯಲ್ಲಿ ಚೆನ್ನಾಗಿ ತಿಳಿದಿದ್ದ ಊರುಗಳೆಂದರೆ ಸೂರ್ವೆ(ನಮ್ಮೂರು) ಮತ್ತು ನಮ್ಮ ತಾಯಿಯ ತವರು ಮನೆ ಬೇಲೇಕೇರಿ. ಜಿ.ಸಿ.ಕಾಲೇಜಿನಲ್ಲಿ ಓದುವಾಗಲೂ ಅಂಕೋಲೆಯ ಇತರ ಊರುಗಳ ಬಗ್ಗೆ ತಿಳಿದುಕೊಳ್ಳಲು ಸಮಯ ಸಾಕಾಗಲಿಲ್ಲ ಮತ್ತು ತಿಳಿದುಕೊಳ್ಳುವ ಪ್ರಯತ್ನಕ್ಕೂ ಕೈಹಾಕಲಿಲ್ಲ ಎಂದೇ ಹೇಳಬಹುದು. ಆದರೆ ಯಾವಾಗ ಊರಿನಿಂದ ದೂರವಾದನೋ ಆಗ ಶುರುವಾಯಿತು ನೋಡಿ ಈ ಮಹಾಮಾರಿ ಕಾಯಿಲೆ 'ಅಂಕೋಲೆಯ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವುದು'.. ಮೊದಮೊದಲು ಬೆಂಗಳೂರಿಗೆ ಬಂದಾಗ "ಇಷ್ಟೊಂದ್ ಜನಾ ಇಲ್ಲಿ ಯಾರು ನಮೌರು? "ಎಂಬ ಆರ್ತನಾದ ಇನ್ನೂ ನಿಲ್ಲುವ ಸೂಚನೆಗಳನ್ನು ನೀಡುತ್ತಿಲ್ಲ. ಮೊದಲೇ ಹೇಳಿದಂತೆ ಅಂಕೋಲೆ ಸಹ್ಯಾದ್ರಿಯ ತಪ್ಪಲಿನಲ್ಲಿ ಮತ್ತು ಕಡಲಿನ ಕಿನಾರೆಯಲ್ಲಿ ಇರುವ ನಾಡು.ಆದ್ದರಿಂದ ಇದರ ಭೌಗೋಳಿಕ ಲಕ್ಷಣಗಳನ್ನೂ, ಗಂಗಾವಳಿ ನದಿಯ ಹರಿವನ್ನು ತಿಳಿಯುವ ಆಸೆ ಮೊದಲಿನಿಂದಲೂ ಇತ್ತು. ಆಗ ಸಹಾಯಕ್ಕೆ ಬಂದ ಬ್ರಹ್ಮಾಸ್ತ್ರ ಈ ವಿಕಿಮ್ಯಾಪಿಯಾ. ಅಂತರ್ಜಾಲದ ಹದ್ದಿನ ಕಣ್ಣು ಎಂದೇ ಕರೆಯಬಹುದಾದ ಈ ವೆಬ್ ಸೈಟ್ ಇಡೀ ಜಗತ್ತಿನ ಎಲ್ಲ ಭಾಗಗಳ ಮೇಲ್ಮೈ ಚಿತ್ರಣವನ್ನು ನಮಗೆ ಒದಗಿಸುತ್ತದೆ. ನನಗೆ ಅಂಕೋಲೆಯ ಬೆಟ್ಟದೂರುಗಳ ಬಗ್ಗೆ ಗಂಧ ಗಾಳಿಯೂ ತಿಳಿದಿರಲಿಲ್ಲ. ಕೊನೆಯ ಜುಲೈ ತಿಂಗಳಲ್ಲಿ ನಮ್ಮ ಸಂಬಂಧಿಕರ ಮನೆಗೆ ಹೋದಾಗಲೇ ನಾನು ಆ ಊರುಗಳನ್ನು ನೋಡಿದ್ದು.ಆದರೆ ಬಸ್ಸಲ್ಲಿ ಹೋಗಿದ್ದರಿಂದ ಪ್ರಕೃತಿಯ ಸಹಜ ಸೌಂದರ್ಯವನ್ನು ಸವಿಯಲಾಗಲಿಲ್ಲ. ಈ ಬಾರಿ ದೀಪಾವಳಿಗೆ ಈ ಎಲ್ಲ ಊರುಗಳನ್ನು ಸುತ್ತುವ ಯೋಜನೆಯನ್ನು ಹಾಕಿಕೊಂಡು ಹೋಗುತ್ತಿದ್ದೇನೆ.. ವಿಕಿಮ್ಯಾಪಿಯಾದಿಂದ ಎಲ್ಲ ಪ್ರಮುಖ ಲ್ಯಾಂಡ್ ಮಾರ್ಕ್ ಗಳನ್ನು, ಪ್ರಮುಖ ಪ್ರೇಕ್ಷಣಿಯ ಸ್ಥಳಗಳನ್ನು ಗುರುತಿಸಿಕೊಂಡು ಅವುಗಳನ್ನು ಭೇಟಿ ನೀಡುವ ಮಹದಾಸೆಯಿಂದ ಮನೆಗೆ ತೆರಳುತ್ತಿದ್ದೇನೆ. ನನ್ನ ಕಾರ್ಯಯೋಜನೆಯು ಫಲಿಸಿತೋ ಅಥವಾ ಟುಸ್ಸಾಯಿತೋ ಎಂದು ಮನೆಯಿಂದ ಬಂದ ನಂತರ ಬರೆಯುವೆ.

No comments: