Saturday, March 7, 2009

ಮಿರ್ಜಾನ ಕೋಟೆ

ನಾನು ಚಿಕ್ಕಂದಿನಿಂದಲೂ 'ಮಿರ್ಜಾನ ಕೋಟೆ' ಬಗ್ಗೆ ಕೇಳುತ್ತಾ ಬಂದಿದ್ದರೂ, ನಮ್ಮ ಊರಿನಿಂದ ಸುಮಾರು ಇಪ್ಪತೈದು ಕಿ.ಮೀ.ದೂರದಲ್ಲಿದ್ದ ಈ ಕೋಟೆಯನ್ನು ನೋಡಲು ಕಾಲ ಕೂಡಿ ಬಂದಿರಲಿಲ್ಲ. ಆದರೆ ನಮ್ಮ ಅಂಕೋಲೆಯ ಟ್ರೇನಿಂಗ್ ಕಾಲೇಜಿನ ಹಿಂದಿರುವ ಕೋಟೆಯಿಂದ ಮಿರ್ಜಾನ್ ಕೋಟೆಗೆ ಸುರಂಗವಿದೆ ಎಂಬ ಮಾತುಗಳನ್ನೆಲ್ಲ ಕೇಳಿದ್ದೆ. ಕಳೆದ ದೀಪಾವಳಿ ಸಮಯದಲ್ಲಿ ಈ ಕೋಟೆಯನ್ನು ಕಾಣುವ ಕಾಲ ಕೂಡಿ ಬಂತು.ಕೋಟೆಯ ಐತಿಹ್ಯದ ಬಗ್ಗೆ ತಿಳಿದ ಲೋಕಲ್ ಗೈಡು ಲೋಕೇಶ , ನಾನು ಮತ್ತು ಪವನ್ ಮೂರು ಜನ ನಮ್ಮ ಸ್ಲ್ಪೆಂಡರ್ ನಲ್ಲೆ ಮಿರ್ಜಾನಿನ ಕೋಟೆಯನ್ನು ಗೆಲ್ಲಲು ಹೊರಟೆದ್ದೇವೆ ಎಂಬ ಪೋಸು ನೀಡುತ್ತ ಟ್ರಿಪಲ್ ರೈಡ್ ಮಾಡುತ್ತ ಕೋಟೆಯೆಡೆಗೆ ಹೊರಟೆವು.ರಾಜೇಶ್ ನಾಯ್ಕರೂ ಸಹ ಮಿರ್ಜಾನಿನ ಕೋಟೆಯ ಬಗ್ಗೆ ಹಿಂದೆಯೆ ಪೋಸ್ಟ್ ಮಾಡಿದ್ದು, ಅದನ್ನು ಓದಿದ್ದೂ ಸಹ ನಾನು ಈ ಕೋಟೆಯನ್ನು ನೋಡಲು ಇನ್ನೊಂದು ಕಾರಣವಾಗಿತ್ತು.

ಅಂಕೋಲೆಯಿಂದ ಕುಮಟೆಗೆ ಹೋಗುವಾಗ ಅಂಕೋಲೆಯಿಂದ ಸುಮಾರು 25 ಕಿ.ಮೀ. ದೂರದಲ್ಲಿ ಮಿರ್ಜಾನ ಸಿಗುತ್ತದೆ. ಮಿರ್ಜಾನಿನ ಆಟದ ಬಯಲಿನ ವಿರುದ್ಧ ಬದಿಯಲ್ಲಿ ಸಿಗುವ ತಿರುವಲ್ಲಿ ಸಾಗಿದಾಗ ಕೆಲವೇ ಸೆಕೆಂಡುಗಳಲ್ಲಿ ನಮಗೆ ಮಿರ್ಜಾನಿನ ಕೋಟೆ ಕಾಣಸಿಗುತ್ತದೆ.




ಸುಮಾರು 8 ರಿಂದ 9 ಎಕರೆಯ ಜಾಗದಲ್ಲಿ ಹರಡಿರುವ ಈ ಕೋಟೆಯು ಭಾರತೀಯ ಪುರಾತತ್ವ ಇಲಾಖೆಯ ನಿವೇಶನ(Archieological Site)ಗಳಲ್ಲೊಂದು. ಇದರ ಬಗ್ಗೆ ರಾಜೇಶ್ ನಾಯ್ಕ್ ರು ಮಿರ್ಜಾನ ಕೋಟೆಯ ಕುರಿತು ಮಾಡಿದ ಪೋಸ್ಟ್ ನಲ್ಲಿ ಮಾಹಿತಿಯಿದೆ.
ನಾನೆಂದು ಈ ಹಿಂದೆ ಮಿರ್ಜಾನಿನಂತಹ ದೊಡ್ಡ ಕೋಟೆಯನ್ನು ನೋಡಿರಲಿಲ್ಲ. ದಾರಿಯಲ್ಲಿರುವ ಚಿಕ್ಕ ತಿರುವು ಕೊನೆಗೊಂಡನೆಯೆ ಈ ಬೃಹತ್ ಕೋಟೆ ನನ್ನ ಕಣ್ಮುಂದಿತ್ತು. ಒಮ್ಮೆಲೆ ದಿಗ್ಭ್ರಾಂತನಾದ ನಾನು ಬೈಕ್ ನ್ನು ಬೇಗನೆ ಒಂದೆಡೆ ನಿಲ್ಲಿಸಿ ಕೊಟೆಯ ಒಳಹೋಗಲು ತುದಿಕಾಲಲ್ಲಿ ನಿಂತೆನು. ಲೋಕೇಶ ಕೋಟೆಗೆ ಹೋಗಲು ಮಹಾದ್ವಾರವಿದೆ. ಆದರೆ ನಾವು ಗುಪ್ತದ್ವಾರದಿಂದ ಹೋಗೋಣ ಎಂದು ಒಂದು ಚಿಕ್ಕ ಕಿಂಡಿಯನ್ನು ನಮಗೆ ತೋರಿಸಿದ. ಹಾಗೋ ಹೀಗೋ ಆ ಕಿಂಡಿಯ ಮೂಲಕ ನಾವು ಮಿರ್ಜಾನ್ ಕೋಟೆಯನ್ನು ಪ್ರವೇಶಿಸಿದೆವು. ಮೆಟ್ಟಿಲುಗಳನ್ನು ಹತ್ತಿ ಕೋಟೆಯ ಸಮತಟ್ಟಾದ ಸ್ಥಳಕ್ಕೆ ಬಂದೆವು.








ಈ ಕೋಟೆಯ ಕಲ್ಲುಗಳು ಕೆಲವೆಡೆ ಬಿದ್ದು ಹೋಗಿದ್ದು ಅಂಥ ಸ್ಥಳಗಳಲ್ಲಿ ಪುನಃ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಆ ಕಲ್ಲುಗಳನ್ನು ದಾಟಿ ಕೋಟೆಯ ಮಧ್ಯಸ್ಥಳಕ್ಕೆ ಬಂದೆವು. ಈ ಕೋಟೆಯು ಮೂರು ಮುಖ್ಯ ಬಾವಿಗಳನ್ನು ಹೊಂದಿದ್ದು 2 ಬಾವಿಗಳು ಕೋಟೆಯ ಮಧ್ಯಭಾಗದಲ್ಲಿವೆ. ಇನ್ನೊಂದು ಬಾವಿ ಕೋಟೆಯ ಹಿಂದಿನ ಭಾಗದಲ್ಲಿದೆ. ಈ ಎರಡು ಬಾವಿಗಳು ತುಂಬಾ ಆಳವಾಗಿದ್ದು ಬಾವಿಯ ಗುಂಟ ಹೇರಳವಾಗಿ ಸಸ್ಯಗಳು ಬೆಳೆದುಕೊಂಡಿವೆ. ಬಾವಿಯನ್ನು ಮೇಲಿನಿಂದಲೇ ನೋಡಬಹುದು ಇಲ್ಲವೇ ಬಾವಿಯ ನೀರಿನ ಮಟ್ಟಕ್ಕೆ ತಲುಪುವಂತೆ ಮೆಟ್ಟಿಲುಗಳಿವೆ. ಲೋಕೇಶ ಈ ಬಾವಿಗಳಲ್ಲಿ ಅನೇಕ ಚಿತ್ರಗಳ ಚಿತ್ರೀಕರಣ ಆದುದನ್ನು ನೆನೆಪಿಸಿಕೊಳ್ಳುತ್ತಿದ್ದ. ರಮೇಶ ಅರವಿಂದ್ ನಟಿಸಿದ "ಸಂಭ್ರಮ" ಚಿತ್ರದ 'ಯಾರು ಭೂಮಿಗೆ' ಹಾಡು, ಪಾರ್ಥ ಚಿತ್ರದ ಕೆಲವು ಹಾಡುಗಳು ಹಾಗೂ ಸದ್ಯ ಬಂದ "ಜಾಲ್ ಡೇಸ್" ಚಿತ್ರದ ಹಾಡುಗಳಲ್ಲದೇ ಇನ್ನೂ ಅನೇಕ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ. "ಮಾತಾಡ್ ಮಾತಾಡ್ ಮಲ್ಲಿಗೆ " ಚಿತ್ರದಲ್ಲೂ ಈ ಕೋಟೆ ಕಾಣಿಸಿಕೊಂಡಿದೆ.

ನಾಗದೇವರ ಕಲ್ಲುಗಳು, ಕುದುರೆ ಕಂಬ ಮತು ಧ್ವಜಸ್ಥಂಬ
ಕೋಟೆಯ ಮಧ್ಯಭಾಗದ ಸಮೀಪದಲ್ಲಿ ಒಂದು ಮರದಡಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ನಾಗದೇವರ ಕಲ್ಲುಗಳಿದ್ದು, ಅವುಗಳಲ್ಲಿ ತಿರುಪತಿಯ ವೆಂಕಟೇಶನನ್ನು ಹೋಲುವ ಒಂದು ವಿಗ್ರಹವೂ ಇತ್ತು. ಅದರ ಮುಂದೆ ಒಂದು ಪ್ರಾಣಿಯ ವಿಗ್ರಹವಿದ್ದು ಅದು ಸಿಂಹವನ್ನು ಹೋಲುತ್ತಿತ್ತು.ಲೋಕೇಶ ಈ ವಿಗ್ರಹಗಳಿಗೆ ಆಗಾಗ ಪೂಜೆಯೂ ಸಲ್ಲುತ್ತದೆ ಎಂಬುದಾಗಿ ತಿಳಿಸಿದ. ಮರದ ಹಿಂಭಾಗದಲ್ಲಿ ಶಿವಲಿಂಗವನ್ನು ಹೋಲುವ ಕಲ್ಲಿದ್ದು ಅದಕ್ಕೆ ಪೂಜೆಯನ್ನು ಮಾಡಿದ್ದರು.





ಕೋಟೆಯೊಳಗೆ ಒಂದು ಧ್ವಜಸ್ಥಂಬವಿದ್ದು ಸ್ವಾತಂತ್ರ್ಯ ಮತ್ತು ಗಣರಾಜ್ಯ ದಿನಾಚರಣೆಯಂದು ಇಲ್ಲಿ ಧ್ವಜಾರೋಹಣ ಮಾಡುತ್ತಾರೆ ಅಲ್ಲದೇ ಸುತ್ತಮುತ್ತಲಿನ ಶಾಲೆಗಳ ಸುಮಾರು 600 ವಿಧ್ಯಾರ್ಥಿಗಳು ಭಾಗವಹಿಸುವರು ಎಂಬುದಾಗಿ ಲೋಕೇಶ ಅಲ್ಲದೇ ಕೋಟೆಯನ್ನು ಕಾಯಲು ಸರ್ಕಾರದಿಂದ ನೇಮಕಗೊಂಡ ನೌಕರರೊಬ್ಬರು ತಿಳಿಸಿದರು.



ಕೋಟೆಯ ಹಿಂಬದಿಯಲ್ಲಿ ಸುಮಾರು 15 ಅಡಿ ಎತ್ತರವಿರುವ ಮತ್ತು ತೆಂಗಿನಮರದ ದಿಣ್ಣೆಯಷ್ಟು ದಪ್ಪವಿರುವ ಕಪ್ಪುಬಣ್ಣದ ಒಂದು ಕಂಬವಿದ್ದು ಇದನ್ನು 'ಕುದುರೆ ಕಂಬ' ಎನ್ನುವರು. ಈ ಕುದುರೆ ಕಂಬದ ಬದಿಯಲ್ಲಿ ನಿಂತು ನಾವು ಕೋಟೆಯ ಮಗ್ಗುಲಲ್ಲಿ ನಿರ್ಮಿಸಿದ ಕಂದಕಗಳನ್ನು ನೋಡಬಹುದಾಗಿದೆ. ಹಿಂದೆ ಕೋಟೆಯನ್ನು ವೈರಿಗಳಿಂದ ರಕ್ಷಿಸಲು ಇಂತಹ ಆಳವಾದ ಕಂದಕಗಳನ್ನು ತೋಡುತ್ತಿದ್ದರಂತೆ.



ಆಗ ಈ ಕಂದಕಗಳಲ್ಲಿ ನೀರೂ ಇರುತ್ತಿತ್ತು. ಆದರೆ ಈಗ ಇವುಗಳಲ್ಲಿ ಪಾರ್ಥೇನಿಯಮ್(ಕಾಂಗ್ರೆಸ್ ಗಿಡಗಳು ಎಂದೇ ಈಗ ಫೇಮಸ್ಸು!!) ಬೆಳೆದು ಅವುಗಳ ಆಳವೂ ಸರಿಯಾಗಿ ಕಾಣದಂತಾಗಿದೆ. ಕೋಟೆಯ ಮೂಲಕ ಒಂದು ಶಿಥಿಲಾವಸ್ಥೆಯಲ್ಲಿರುವ ಸುರಂಗವಿದೆ ಎಂದು ತಿಳಿದಿದ್ದರೂ ಆ ಸುರಂಗದ ಕಡೆ ತಲೆ ಹಾಕಲು ಮನಸ್ಸು ಬರಲಿಲ್ಲ.

ಸುತ್ತ ಮುತ್ತಲಿನ ಪರಿಸರ




ಮಿರ್ಜಾನಿನ ಕೋಟೆಯ ಎತ್ತರದ ಪ್ರದೇಶಗಳಲ್ಲಿ ನಿಂತು ನೋಡಿದರೆ ಕೆಲವು ಗದ್ದೆಗಳ ಅಂತರದಲ್ಲಿ ಹರಿಯುವ ಅಘನಾಶಿನಿ ನದಿ, ದೂರದಲ್ಲಿರುವ ಐಗಳ ಕೂರ್ವೆಗಳನ್ನೂ ನೋಡಬಹುದಾಗಿದೆ. ಒಟ್ಟಿನಲ್ಲಿ ಹಿಂದಿನ ಅವಶೇಶಗಳನ್ನೂ ಇನ್ನು ಉಳಿಸಿಕೊಂಡು ಬಂದಿರುವ ಈ ಕೋಟೆಯನ್ನು ನೋಡಿದಾಗ ಮನಸ್ಸಿಗೆ ಖುಷಿಯಾಗಿತ್ತು.

Monday, March 2, 2009

ಅಂಕೋಲೆಯಲ್ಲಿ ನಡೆದ ದಕ್ಷಿಣ ಭಾರತದ ವಾಲಿಬಾಲ್ ಪಂದ್ಯಾವಳಿ

ಕೊನೆಯ ಸೆಮ್ ಗಾಗಿ ಕಾಲೇಜಿಗೆ ಬರುವಾಗಲೇ 'ಇನ್ನು ಕೇವಲ ಹತ್ತು ದಿನಗಳಲ್ಲಿ ಅಂಕೋಲೆಯಲ್ಲಿ ದಕ್ಷಿಣ ಭಾರತ ಮಟ್ಟದ ವಾಲಿಬಾಲ್ ಪಂದ್ಯಾವಳಿ ಇದೆ.ಯಾವ ನೆಪದಲ್ಲಿ ಮನೆಗೆ ಬರಲಿ' ಎಂದು ವಿಚಾರ ಮಾಡುತ್ತಲೇ ಅಂಕೋಲೆಯಿಂ ಫೆಬ್ರುವರಿ 8 ರಾತ್ರಿ ಬಸ್ಸಿಗೆ ಹತ್ತಿದ್ದೆ. ವಾಲಿಬಾಲ್ ಪಂದ್ಯಾವಳಿ ಫೆಬ್ರುವರಿ 17 ರಿಂದ 21 ರವರೆಗೆ ಇತ್ತು.ನನ್ನ ಅದೃಷ್ಟವೋ ಏನೋ 23ರಂದು ಶಿವರಾತ್ರಿ ಕೂಡ ಇತ್ತು. ಕೊನೆಯ ಸೆಮ್ ನಲ್ಲಿ ಪ್ರಾಜೆಕ್ಟ್ ಗಾಗಿ ಪ್ರತೀ ವಾರದ ಸೋಮವಾರ,ಮಂಗಳವಾರ ಮತ್ತು ಬುಧವಾರ ರಜೆಯಿದ್ದುದರಿಂದ ಲ್ಲದೇ ಅದೇ ಸಂದಿನಲ್ಲಿ ಶಿವರಾತ್ರಿ ಬಂದುದರಿಂದ ದೇವರ ನೆಪವೊಡ್ಡಿ ಪಂದ್ಯಾವಳಿಯ ಕೊನೆ ದಿನ ಅಂದರೆ 21ರಂದು ಮನೆ ತಲುಪಿದೆ. ಮಹಿಳೆಯರ ಮತ್ತು ಪುರುಷರ ವಿಭಾಗದ ಅಂತಿಮ ಪಂದ್ಯಗಳು ಮಾತ್ರ ಉಳಿದುಕೊಂಡಿದ್ದವು ಎಂದು ತಿಳಿದಿತ್ತು.






ಪಂದ್ಯಾವಳಿ ನದೆಯುತ್ತಿದ್ದುದ್ದು ಅಗ್ಗರಗೋಣ ಎಂಬ ಗ್ರಾಮದಲ್ಲಿ. ಗಂಗಾವಳಿ ನದಿಯ ಬಲ ದಿಕ್ಕಿನಲ್ಲಿ ಇರುವ ಚೆಂದದ ಊರು. ಹಿಂದೆ ಊರ ಬಗ್ಗೆ ಕೇಳಿದ್ದರೂ ಸಹ ಊರನ್ನು ನೋಡಿರಲಿಲ್ಲ. ಅಲ್ಲದೇ ಊರಿನ ಸೊಬಗನ್ನು ಕುರಿತು ಖ್ಯಾತ ವಿಮರ್ಶಕರಾದ ಪ್ರೊ.ಜಿ.ಎಚ್.ನಾಯಕರು ತಮ್ಮ 'ಗುಣಗೌರವ' ಎಂಬ ಲೇಖನಗಳ ಸಂಕಲನವೊಂದರಲ್ಲಿ ವರ್ಣಿಸಿದ್ದುದನ್ನು ಕೆಲವೇ ದಿನಗಳ ಹಿಂದೆ ಓದಿದ್ದಕ್ಕೋ ಏನೋ ಊರನ್ನು ಕಾಣುವ ಹಂಬಲ ಹೆಚ್ಚಾಗುತ್ತಿತ್ತು.ಅಗ್ಗರಗೋಣಿಗೆ ನಮ್ಮ ಮನೆಯಿಂದ ಗಂಗಾವಳಿ ತಾರಿಯನ್ನು ದಾಟಿ ಹೋಗಬಹುದು ಇಲ್ಲವೇ ರಾಷ್ಟ್ರೀಯ ಹೆದ್ದಾರಿ-17 ಮೂಲಕ ಮಾದನಗೇರಿ ಕ್ರಾಸ್ ವರೆಗೆ ಹೋಗಿ ಅಲ್ಲಿಂದ ಒಳರಸ್ತೆಯಲ್ಲಿ ಹೋಗಬಹುದು. ಬೈಕ್ ಹೊಡೆಯುವ ಚಪಲ ತುಸು ಜಾಸ್ತಿಯೇ ಇದ್ದುದರಿಂದ ಎರದನೇಯ ಆಯ್ಕೆಯನ್ನು ಆಯ್ಕೆಮಾಡಿ ಅಗ್ಗರಗೋಣಿನ ಕಡೆಗೆ ಹೊರಟೆ.ಗಂಗಾವಳಿ ರೈಲ್ವೆ ಬ್ರಿಡ್ಜು, ಅಂಕೋಲೆಯ ಸ್ವಾತಂತ್ರ್ಯ ಹೋರಾಟದಲ್ಲಿ ನಡೆದ ಅನೇಕ ರೋಚಕ ಘಟನೆಗಳಿಗೆ ಸಾಕ್ಷಿಯಾದ ಶಿರೂರು ಮತ್ತು ಉಳುವರೆ ತಾರಿಗಳು ಎಲ್ಲವನ್ನೂ ಮೊದಲ ಬಾರಿಗೆ ನೋಡಿದ ಕಾರಣಕ್ಕಾಗಿ ಮನದಲ್ಲಿ ಏನೋ ಸಾರ್ಥಕತೆಯ ಅನುಭವ.

ಸುಮಾರು 5.30 ಸುಮಾರು ಅಗ್ಗರಗೋಣದ ವಾಲಿಬಾಲ್ ಕ್ರೀಡಾಂಗನವನ್ನು ತಲುಪಿದೆ. ಆದರೆ ಪಂದ್ಯ ಶುರುವಾಗಲು ಇನ್ನೂ ಒಂದುವರೆ-ಎರಡು ಘಂಟೆಗಳು ಬಾಕಿ ಇದ್ದವು. ಏಕಾಂಗಿತನ ಕಾಡಲು ಶುರುವಾಗಿತ್ತು. ಆಗ ನೆನಪಿಗೆ ಬಂದವನು ಬೆಂಗಳುರಿನಲ್ಲಿ ಓದುತ್ತಿದ್ದ ವಿಕ್ಕಿ. ಆತನ ಮನೆಯನ್ನು ಹುಡುಕಿ ಆತನನ್ನು ಭೇಟಿಯಾದ ನಂತರ ಒಬ್ಬೊಬ್ಬರೇ ಪರಿಚಯವಾಗಲು ಶುರುವಾದರು. ಊರಿನ ಸಮೀಪದಲ್ಲೇ ಹರಿಯುತ್ತಿದ್ದ ಗಂಗಾವಳಿಯನ್ನೂ ನೋಡಿ ಆಯಿತು.



ಸೂರ್ಯ ತನ್ನ ದಿನದ ಡ್ಯೂಟಿಯನ್ನು ಮುಗಿಸಾಗಿತ್ತು. ಕ್ರೀಡಾಂಗಣವನ್ನು ಪುನಃ ಸೇರುತ್ತಿದ್ದಂತೆಯೇ ' ಮಹಿಳೆಯರ ಅಂತಿಮ ಪಂದ್ಯ ಕೆಲವೇ ಕ್ಸಃಅಣಗಳಲ್ಲಿ ಶುರುವಾಗಲಿದೆ' ಎಂಬ ಆಕಾಶವಾಣಿ ಹೊರಬಿತ್ತು.






ಹೆಚ್ಚೆಂದರೆ ಎರಡು ಸಾವಿರ ಜನ ಬರಬಹುದು ಎಂಬ ಭ್ರಮೆಯಲ್ಲಿದ್ದ ನನಗೆ ಅಲ್ಲಿನ ಏಳರಿಂದ ಎಂಟು ಸಾವಿರ ಜನರ ಜನಸಾಗರವನ್ನು ಕಂಡಾಗ ಅಚ್ಚರಿಯ ಜೊತೆಗೆ ಖುಷಿಯೂ ಅಯಿತು.ಕೇರಳ ಮತ್ತು ತಮಿಳುನಾಡು ತಂಡಗಳು ಸೆಣಸುತ್ತಿದ್ದವು. ಕೊನೆಯ ಸೆಟ್ ನವರೆಗೆ ಹೋದ ಪಂದ್ಯವನ್ನು ಕೇರಳ 3-2 ರಿಂದ ಗೆದ್ದರೂ ಪ್ರಬಲ ಹೋರಾಟ ನೀಡಿದ ತಮಿಳುನಾಡೂ ಸಹ ಜನರ ಗೌರವಕ್ಕೆ ಪಾತ್ರವಾಯಿತು.ಪುರುಷರ ವಿಭಾಗದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಫೈನಲ್ ಹಂಅವನ್ನು ತಲುಪಿದ್ದವು.



ಹಿಂದಿನ ದಿನವೇ ಬಲಿಷ್ಠ ಕೇರಳವನ್ನು ಸೋಲಿಸಿದ್ದುದರಿಂದ ಕರ್ನಾಟಕವೇ ಫೈನಲ್ ಗೆಲ್ಲಬಹುದು ಎಂಬೆಲ್ಲ ಜನರ ಲೆಕ್ಕಾಚಾರದ ನಡುವೆಯೇ ಪಂದ್ಯ ಪ್ರಾರಂಭವಾಯಿತು. ಆದರೆ ಮೊದಲ ಸೆಟ್ ನಿಂದಲೇ ತನ್ನ ಸೋಲೆಂಬ ಸಮಾಧಿಗೆ ಅಡಿಗಲ್ಲನಿಟ್ಟ ಕರ್ನಾಟಕ ಮುಂದೆ ಚೇತರಿಸಿಕೊಳ್ಳಲಿಲ್ಲ. ಮೊದಲ ಮೂರು ಸೆಟ್ ಗಳನ್ನು ಸೋಲುವುದರ ಮೂಲಕ ಶರಣಾದ ಕರ್ನಾಟಕ , ತಮಿಳುನಾಡಿಗೆ ಜಯವನ್ನು ಬಿಟ್ಟುಕೊಟ್ಟಿತು.



ವಿವರಣೆಗಾರರು ತಮ್ಮ ಕುಚೋದ್ಯ ಮಾತುಗಳಿಂದ ಜನರನ್ನು ನಗಿಸಿದರೂ ಸಹ ಕರ್ನಾಟಕ ಸೋತದ್ದಂತೂ ಜನರಲ್ಲಿ ನಿರಾಶೆ ಮೂಡಿಸಿತ್ತು. ಪಂದ್ಯಾವಳಿ ನಡೆಯಲು ತಮ್ಮಿಂದಾದ ಸಕಲ ಸಹಾಯಗಳನ್ನು ಮಾಡಿದ ಗೋಕರ್ಣದ ಸ್ವಾಮೀಜಿಗಳು ಸಹ ಪಂದ್ಯವನ್ನು ವೀಕ್ಷಿಸಿದ್ದು ವಿಶೇಷ. ರಾತ್ರಿಯೇ ನಮ್ಮ ದೊಡ್ಡಮ್ಮನ ಮಗನ ಜೊತೆ ಬೇಲೇಕೇರಿಯನ್ನು ಸೇರಿದಾಗ ಎರಡು ಕಾಲಾದರೂ ವಾಲಿಬಾಲ್ ನೆಪದಲ್ಲಿ ಅಗ್ಗರಗೋಣದಂತಹ ಚೆಂದದ ಊರನ್ನು ನೋಡಿದ್ದು ಮನಸ್ಸಿಗೆ ಖುಷಿ ಕೊಟ್ಟಿತ್ತು.