Saturday, March 7, 2009

ಮಿರ್ಜಾನ ಕೋಟೆ

ನಾನು ಚಿಕ್ಕಂದಿನಿಂದಲೂ 'ಮಿರ್ಜಾನ ಕೋಟೆ' ಬಗ್ಗೆ ಕೇಳುತ್ತಾ ಬಂದಿದ್ದರೂ, ನಮ್ಮ ಊರಿನಿಂದ ಸುಮಾರು ಇಪ್ಪತೈದು ಕಿ.ಮೀ.ದೂರದಲ್ಲಿದ್ದ ಈ ಕೋಟೆಯನ್ನು ನೋಡಲು ಕಾಲ ಕೂಡಿ ಬಂದಿರಲಿಲ್ಲ. ಆದರೆ ನಮ್ಮ ಅಂಕೋಲೆಯ ಟ್ರೇನಿಂಗ್ ಕಾಲೇಜಿನ ಹಿಂದಿರುವ ಕೋಟೆಯಿಂದ ಮಿರ್ಜಾನ್ ಕೋಟೆಗೆ ಸುರಂಗವಿದೆ ಎಂಬ ಮಾತುಗಳನ್ನೆಲ್ಲ ಕೇಳಿದ್ದೆ. ಕಳೆದ ದೀಪಾವಳಿ ಸಮಯದಲ್ಲಿ ಈ ಕೋಟೆಯನ್ನು ಕಾಣುವ ಕಾಲ ಕೂಡಿ ಬಂತು.ಕೋಟೆಯ ಐತಿಹ್ಯದ ಬಗ್ಗೆ ತಿಳಿದ ಲೋಕಲ್ ಗೈಡು ಲೋಕೇಶ , ನಾನು ಮತ್ತು ಪವನ್ ಮೂರು ಜನ ನಮ್ಮ ಸ್ಲ್ಪೆಂಡರ್ ನಲ್ಲೆ ಮಿರ್ಜಾನಿನ ಕೋಟೆಯನ್ನು ಗೆಲ್ಲಲು ಹೊರಟೆದ್ದೇವೆ ಎಂಬ ಪೋಸು ನೀಡುತ್ತ ಟ್ರಿಪಲ್ ರೈಡ್ ಮಾಡುತ್ತ ಕೋಟೆಯೆಡೆಗೆ ಹೊರಟೆವು.ರಾಜೇಶ್ ನಾಯ್ಕರೂ ಸಹ ಮಿರ್ಜಾನಿನ ಕೋಟೆಯ ಬಗ್ಗೆ ಹಿಂದೆಯೆ ಪೋಸ್ಟ್ ಮಾಡಿದ್ದು, ಅದನ್ನು ಓದಿದ್ದೂ ಸಹ ನಾನು ಈ ಕೋಟೆಯನ್ನು ನೋಡಲು ಇನ್ನೊಂದು ಕಾರಣವಾಗಿತ್ತು.

ಅಂಕೋಲೆಯಿಂದ ಕುಮಟೆಗೆ ಹೋಗುವಾಗ ಅಂಕೋಲೆಯಿಂದ ಸುಮಾರು 25 ಕಿ.ಮೀ. ದೂರದಲ್ಲಿ ಮಿರ್ಜಾನ ಸಿಗುತ್ತದೆ. ಮಿರ್ಜಾನಿನ ಆಟದ ಬಯಲಿನ ವಿರುದ್ಧ ಬದಿಯಲ್ಲಿ ಸಿಗುವ ತಿರುವಲ್ಲಿ ಸಾಗಿದಾಗ ಕೆಲವೇ ಸೆಕೆಂಡುಗಳಲ್ಲಿ ನಮಗೆ ಮಿರ್ಜಾನಿನ ಕೋಟೆ ಕಾಣಸಿಗುತ್ತದೆ.
ಸುಮಾರು 8 ರಿಂದ 9 ಎಕರೆಯ ಜಾಗದಲ್ಲಿ ಹರಡಿರುವ ಈ ಕೋಟೆಯು ಭಾರತೀಯ ಪುರಾತತ್ವ ಇಲಾಖೆಯ ನಿವೇಶನ(Archieological Site)ಗಳಲ್ಲೊಂದು. ಇದರ ಬಗ್ಗೆ ರಾಜೇಶ್ ನಾಯ್ಕ್ ರು ಮಿರ್ಜಾನ ಕೋಟೆಯ ಕುರಿತು ಮಾಡಿದ ಪೋಸ್ಟ್ ನಲ್ಲಿ ಮಾಹಿತಿಯಿದೆ.
ನಾನೆಂದು ಈ ಹಿಂದೆ ಮಿರ್ಜಾನಿನಂತಹ ದೊಡ್ಡ ಕೋಟೆಯನ್ನು ನೋಡಿರಲಿಲ್ಲ. ದಾರಿಯಲ್ಲಿರುವ ಚಿಕ್ಕ ತಿರುವು ಕೊನೆಗೊಂಡನೆಯೆ ಈ ಬೃಹತ್ ಕೋಟೆ ನನ್ನ ಕಣ್ಮುಂದಿತ್ತು. ಒಮ್ಮೆಲೆ ದಿಗ್ಭ್ರಾಂತನಾದ ನಾನು ಬೈಕ್ ನ್ನು ಬೇಗನೆ ಒಂದೆಡೆ ನಿಲ್ಲಿಸಿ ಕೊಟೆಯ ಒಳಹೋಗಲು ತುದಿಕಾಲಲ್ಲಿ ನಿಂತೆನು. ಲೋಕೇಶ ಕೋಟೆಗೆ ಹೋಗಲು ಮಹಾದ್ವಾರವಿದೆ. ಆದರೆ ನಾವು ಗುಪ್ತದ್ವಾರದಿಂದ ಹೋಗೋಣ ಎಂದು ಒಂದು ಚಿಕ್ಕ ಕಿಂಡಿಯನ್ನು ನಮಗೆ ತೋರಿಸಿದ. ಹಾಗೋ ಹೀಗೋ ಆ ಕಿಂಡಿಯ ಮೂಲಕ ನಾವು ಮಿರ್ಜಾನ್ ಕೋಟೆಯನ್ನು ಪ್ರವೇಶಿಸಿದೆವು. ಮೆಟ್ಟಿಲುಗಳನ್ನು ಹತ್ತಿ ಕೋಟೆಯ ಸಮತಟ್ಟಾದ ಸ್ಥಳಕ್ಕೆ ಬಂದೆವು.
ಈ ಕೋಟೆಯ ಕಲ್ಲುಗಳು ಕೆಲವೆಡೆ ಬಿದ್ದು ಹೋಗಿದ್ದು ಅಂಥ ಸ್ಥಳಗಳಲ್ಲಿ ಪುನಃ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಆ ಕಲ್ಲುಗಳನ್ನು ದಾಟಿ ಕೋಟೆಯ ಮಧ್ಯಸ್ಥಳಕ್ಕೆ ಬಂದೆವು. ಈ ಕೋಟೆಯು ಮೂರು ಮುಖ್ಯ ಬಾವಿಗಳನ್ನು ಹೊಂದಿದ್ದು 2 ಬಾವಿಗಳು ಕೋಟೆಯ ಮಧ್ಯಭಾಗದಲ್ಲಿವೆ. ಇನ್ನೊಂದು ಬಾವಿ ಕೋಟೆಯ ಹಿಂದಿನ ಭಾಗದಲ್ಲಿದೆ. ಈ ಎರಡು ಬಾವಿಗಳು ತುಂಬಾ ಆಳವಾಗಿದ್ದು ಬಾವಿಯ ಗುಂಟ ಹೇರಳವಾಗಿ ಸಸ್ಯಗಳು ಬೆಳೆದುಕೊಂಡಿವೆ. ಬಾವಿಯನ್ನು ಮೇಲಿನಿಂದಲೇ ನೋಡಬಹುದು ಇಲ್ಲವೇ ಬಾವಿಯ ನೀರಿನ ಮಟ್ಟಕ್ಕೆ ತಲುಪುವಂತೆ ಮೆಟ್ಟಿಲುಗಳಿವೆ. ಲೋಕೇಶ ಈ ಬಾವಿಗಳಲ್ಲಿ ಅನೇಕ ಚಿತ್ರಗಳ ಚಿತ್ರೀಕರಣ ಆದುದನ್ನು ನೆನೆಪಿಸಿಕೊಳ್ಳುತ್ತಿದ್ದ. ರಮೇಶ ಅರವಿಂದ್ ನಟಿಸಿದ "ಸಂಭ್ರಮ" ಚಿತ್ರದ 'ಯಾರು ಭೂಮಿಗೆ' ಹಾಡು, ಪಾರ್ಥ ಚಿತ್ರದ ಕೆಲವು ಹಾಡುಗಳು ಹಾಗೂ ಸದ್ಯ ಬಂದ "ಜಾಲ್ ಡೇಸ್" ಚಿತ್ರದ ಹಾಡುಗಳಲ್ಲದೇ ಇನ್ನೂ ಅನೇಕ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ. "ಮಾತಾಡ್ ಮಾತಾಡ್ ಮಲ್ಲಿಗೆ " ಚಿತ್ರದಲ್ಲೂ ಈ ಕೋಟೆ ಕಾಣಿಸಿಕೊಂಡಿದೆ.

ನಾಗದೇವರ ಕಲ್ಲುಗಳು, ಕುದುರೆ ಕಂಬ ಮತು ಧ್ವಜಸ್ಥಂಬ
ಕೋಟೆಯ ಮಧ್ಯಭಾಗದ ಸಮೀಪದಲ್ಲಿ ಒಂದು ಮರದಡಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ನಾಗದೇವರ ಕಲ್ಲುಗಳಿದ್ದು, ಅವುಗಳಲ್ಲಿ ತಿರುಪತಿಯ ವೆಂಕಟೇಶನನ್ನು ಹೋಲುವ ಒಂದು ವಿಗ್ರಹವೂ ಇತ್ತು. ಅದರ ಮುಂದೆ ಒಂದು ಪ್ರಾಣಿಯ ವಿಗ್ರಹವಿದ್ದು ಅದು ಸಿಂಹವನ್ನು ಹೋಲುತ್ತಿತ್ತು.ಲೋಕೇಶ ಈ ವಿಗ್ರಹಗಳಿಗೆ ಆಗಾಗ ಪೂಜೆಯೂ ಸಲ್ಲುತ್ತದೆ ಎಂಬುದಾಗಿ ತಿಳಿಸಿದ. ಮರದ ಹಿಂಭಾಗದಲ್ಲಿ ಶಿವಲಿಂಗವನ್ನು ಹೋಲುವ ಕಲ್ಲಿದ್ದು ಅದಕ್ಕೆ ಪೂಜೆಯನ್ನು ಮಾಡಿದ್ದರು.

ಕೋಟೆಯೊಳಗೆ ಒಂದು ಧ್ವಜಸ್ಥಂಬವಿದ್ದು ಸ್ವಾತಂತ್ರ್ಯ ಮತ್ತು ಗಣರಾಜ್ಯ ದಿನಾಚರಣೆಯಂದು ಇಲ್ಲಿ ಧ್ವಜಾರೋಹಣ ಮಾಡುತ್ತಾರೆ ಅಲ್ಲದೇ ಸುತ್ತಮುತ್ತಲಿನ ಶಾಲೆಗಳ ಸುಮಾರು 600 ವಿಧ್ಯಾರ್ಥಿಗಳು ಭಾಗವಹಿಸುವರು ಎಂಬುದಾಗಿ ಲೋಕೇಶ ಅಲ್ಲದೇ ಕೋಟೆಯನ್ನು ಕಾಯಲು ಸರ್ಕಾರದಿಂದ ನೇಮಕಗೊಂಡ ನೌಕರರೊಬ್ಬರು ತಿಳಿಸಿದರು.ಕೋಟೆಯ ಹಿಂಬದಿಯಲ್ಲಿ ಸುಮಾರು 15 ಅಡಿ ಎತ್ತರವಿರುವ ಮತ್ತು ತೆಂಗಿನಮರದ ದಿಣ್ಣೆಯಷ್ಟು ದಪ್ಪವಿರುವ ಕಪ್ಪುಬಣ್ಣದ ಒಂದು ಕಂಬವಿದ್ದು ಇದನ್ನು 'ಕುದುರೆ ಕಂಬ' ಎನ್ನುವರು. ಈ ಕುದುರೆ ಕಂಬದ ಬದಿಯಲ್ಲಿ ನಿಂತು ನಾವು ಕೋಟೆಯ ಮಗ್ಗುಲಲ್ಲಿ ನಿರ್ಮಿಸಿದ ಕಂದಕಗಳನ್ನು ನೋಡಬಹುದಾಗಿದೆ. ಹಿಂದೆ ಕೋಟೆಯನ್ನು ವೈರಿಗಳಿಂದ ರಕ್ಷಿಸಲು ಇಂತಹ ಆಳವಾದ ಕಂದಕಗಳನ್ನು ತೋಡುತ್ತಿದ್ದರಂತೆ.ಆಗ ಈ ಕಂದಕಗಳಲ್ಲಿ ನೀರೂ ಇರುತ್ತಿತ್ತು. ಆದರೆ ಈಗ ಇವುಗಳಲ್ಲಿ ಪಾರ್ಥೇನಿಯಮ್(ಕಾಂಗ್ರೆಸ್ ಗಿಡಗಳು ಎಂದೇ ಈಗ ಫೇಮಸ್ಸು!!) ಬೆಳೆದು ಅವುಗಳ ಆಳವೂ ಸರಿಯಾಗಿ ಕಾಣದಂತಾಗಿದೆ. ಕೋಟೆಯ ಮೂಲಕ ಒಂದು ಶಿಥಿಲಾವಸ್ಥೆಯಲ್ಲಿರುವ ಸುರಂಗವಿದೆ ಎಂದು ತಿಳಿದಿದ್ದರೂ ಆ ಸುರಂಗದ ಕಡೆ ತಲೆ ಹಾಕಲು ಮನಸ್ಸು ಬರಲಿಲ್ಲ.

ಸುತ್ತ ಮುತ್ತಲಿನ ಪರಿಸರ
ಮಿರ್ಜಾನಿನ ಕೋಟೆಯ ಎತ್ತರದ ಪ್ರದೇಶಗಳಲ್ಲಿ ನಿಂತು ನೋಡಿದರೆ ಕೆಲವು ಗದ್ದೆಗಳ ಅಂತರದಲ್ಲಿ ಹರಿಯುವ ಅಘನಾಶಿನಿ ನದಿ, ದೂರದಲ್ಲಿರುವ ಐಗಳ ಕೂರ್ವೆಗಳನ್ನೂ ನೋಡಬಹುದಾಗಿದೆ. ಒಟ್ಟಿನಲ್ಲಿ ಹಿಂದಿನ ಅವಶೇಶಗಳನ್ನೂ ಇನ್ನು ಉಳಿಸಿಕೊಂಡು ಬಂದಿರುವ ಈ ಕೋಟೆಯನ್ನು ನೋಡಿದಾಗ ಮನಸ್ಸಿಗೆ ಖುಷಿಯಾಗಿತ್ತು.

4 comments:

shriguru said...
This comment has been removed by the author.
shriguru said...

I remember my 2nd standard days in Mirjan(Am I spelled it right??).By the way Lokesh is my 2nd standard buddy..!!Thats a very nice place.Nice one dude:)

ರಾಜೇಶ್ ನಾಯ್ಕ said...

ಮಿರ್ಜಾನ ಕೋಟೆ ಒಂದು ಸುಂದರ ಸ್ಥಳ. ಬೇರೆ ಕೋಟೆಗಳಿಗೆ ಹೋಲಿಸದೆ ಈ ಸ್ಥಳವನ್ನು ಆನಂದಿಸಬೇಕು. ಒಳ್ಳೆಯ ವಿವರ.

vishwanath sunkasal said...

ತುಂಬಾ ಚೆನ್ನಾಗಿದೆ