Sunday, April 12, 2009

ಕೆನರಾ ಲೋಕಸಭಾ ಕ್ಷೇತ್ರ

ಮತ್ತೊಮ್ಮೆ ಐದು ವರ್ಷಗಳು ಕಳೆದು ಲೋಕಸಭಾ ಚುನಾವಣೆ ಎದುರಾಗಿದೆ. ನಮ್ಮ ಅಂಕೋಲೆಯಂತೂ ಕಳೆದ ವರ್ಷದ ಏಪ್ರಿಲ್ ತಿಂಗಳ ನಂತರ ಮೂರನೇ ಬಾರಿ(ಮೇ 2008ರಲ್ಲಿ ಕರ್ನಾಟಕದ ಇತರ 223 ವಿಧಾನಸಭಾ ಕ್ಷೇತ್ರಗಳೊಂದಿಗೆ, ಕಳೆದ ಡಿಸೆಂಬರ್ ನಲ್ಲಿ ಉಪಚುನಾವಣೆ, ಏಪ್ರಿಲ್ ನಲ್ಲಿ ಲೋಕಸಭಾ ಚುನಾವಣೆ) ಚುನಾವಣೆಗೆ ಸಿದ್ದವಾಗುತ್ತಿದೆ. ಒಂದು ವರ್ಷದಿಂದ ಪ್ರತಿ ಬಾರಿ ಮನೆಗೆ ಹೋದಾಗ ಚುನಾವಣೆಗೆ ಸಂಬಂಧಪಟ್ಟ ಪೋಸ್ಟರ್ ಗಳು ಕಣ್ಣಿಗೆ ರಾಚುವುದು ಸಾಮಾನ್ಯವಾಗಿ ಹೋಗಿದೆ. ಹಿಂದೆ ಅಂಕೋಲಾ ವಿಧಾನಸಭಾ ಕ್ಷೇತ್ರ ಎಂಬ ಪ್ರತ್ಯೇಕ ಕ್ಷೇತ್ರವಿತ್ತಾದರೂ ಎರದು ವರ್ಷಗಳ ಹಿಂದೆ ನಡೆದ ಕ್ಷೇತ್ರಗಳ ಮರುವಿಂಗಡಣೆಯಲ್ಲಿ ನಮ್ಮ ಅಂಕೋಲೆಯನ್ನು ಕಾರವಾರ ಕ್ಷೇತ್ರದಡಿಯಲ್ಲಿ ವಿಲೀನಗೊಳಿಸಲಾಯಿತು. ಇನ್ನು ಲೋಕಸಭಾ ಕ್ಷೇತ್ರಗಳನ್ನು ತೆಗೆದುಕೊಂಡರೆ ಅಂಕೋಲೆ ಕೆನರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಚಿಕ್ಕಂದಿನಲ್ಲಿ ಅನುಕ್ರಮವಾಗಿ ಭಾರತದ ಪ್ರಧಾನಮಂತ್ರಿಗಳ ಹೆಸರನ್ನು, ರಾಷ್ಟ್ರಪತಿಗಳ ಹೆಸರನ್ನು ಬಾಯಿಪಾಠ ಮಾಡುತ್ತಿದ್ದರೂ ನಮ್ಮ ಲೋಕಸಭಾ ಕ್ಷೇತ್ರವನ್ನು ಸಂಸತ್ತಿನಲ್ಲಿ ಹಿಂದೆ ಪ್ರತಿನಿಧಿಸಿದವರು ಯಾರ್ಯಾರು ಎಂಬುದು ನಮಗೆ ತಿಳಿದಿರಲಿಲ್ಲ ಹಾಗೂ ನಾವು ಕೂಡ ತಿಳಿಯಲು ಹೋಗಲಿಲ್ಲ. ಆದರೆ ಎಂದು ಕಾಲಗರ್ಭದಲ್ಲಿ ಅವಿತಿರುವ ಬೇರೆ ಬೇರೆ ಸಂಗತಿಗಳನ್ನು ತಿಳಿಯಲು ಹೊರಟಾಗ ನಿಧಾನವಾಗಿ ಅಜ್ಞಾನದ ಪೊರೆ ನಿಧಾನವಾಗಿ ಕಳೆದುಕೊಳ್ಳಲು ಪ್ರಾರಂಭಿಸಿತು. ಹಿಂದೆ ಶಿವರಾಮ ಕಾರಂತರು ಕೆನರಾ ಕ್ಷೇತ್ರದ ಎಂ.ಪಿ.ಸ್ಥಾನದ ಚುನಾವಣೆಗೆ ನಿಂತಿದ್ದರು ಎಂಬುದನ್ನು ಬಿಟ್ಟರೆ 10ನೇ ಈಯತ್ತೆಯವರೆಗೆ ಕ್ಷೇತ್ರದ ಹಿಂದಿನ ಸಂಸದರ ಬಗ್ಗೆ ತಿಳಿದದ್ದು ಶೂನ್ಯವೇ. ಅಂಕೋಲೆಯಲ್ಲಿ ಪಿ.ಯು. ಓದುತ್ತಿರುವಾಗ ಪೇಟೆಯಲ್ಲೊಮ್ಮೆ ಹಿಂದಿನ ಸಂಸದ ಬಿ.ವಿ.ನಾಯಕರನ್ನು ಗೆಳೆಯ ಮಹೇಂದ್ರ ತೋರಿಸಿದ್ದ ನೆನಪು. ಮನೆಗೆ ಬಂದು ತಂದೆಯವರ ಬಳಿ ಕೇಳಿದಾಗ 'ಅವರು ಕಾಂಗ್ರೆಸ್ಸಿನಲ್ಲಿದ್ದುಕೊಂಡೇ ಪಾರ್ಲಿಮೆಂಟನಲ್ಲಿ ಇಂದಿರಾಗಾಂಧಿಯವರನ್ನು ಪ್ರಶ್ನಿಸಿದವರು. ಜ್ಞಾನಜೀವಿಗಳು' ಎಂದು ಹೇಳಿದ್ದರು. ಕೆಲ ತಿಂಗಳುಗಳ ಹಿಂದೆ ಹೀಗೆ ಅಂತರ್ಜಾಲದಲ್ಲಿ ಅತ್ತಿತ್ತ ಸುಳಿದಾಡುತ್ತಿರುವಾಗ ಕೆನರಾ ಕ್ಷೇತ್ರದ ಸಂಸದರ ಹೆಸರನ್ನು ಹುಡುಕಿ ಅಚಾನಕ್ಕಾಗಿ ಸಿಕ್ಕಿಂದ ಲಿಂಕು ಇದು. ಲಿಂಕಿನಲ್ಲಿ ಇಲ್ಲಿಯವರೆಗೆ ಸ್ಪರ್ಧೆಗೆ ನಿಂತ ಇಲ್ಲ ವಿಧಾನಸಭಾ ಹಾಗೂ ಲೋಕಸಭಾ ಅಭ್ಯರ್ಥಿಗಳು ಗಳಿಸಿದ ವೋಟುಗಳ ಅಂಕಿಅಂಶಗಳಿವೆ. ಲಿಂಕನ್ನು ಬಳಸಿ ಚುನಾವಣಾ ಆಯೋಗದ ಸೈಟನ್ನು ಜಾಲಾಡಿದಾಗ ಮತ್ತು ಇನ್ನು ಕೆಲ ಮೂಲಗಳನ್ನು ನಮ್ಮ ಕೆನರಾ ಕ್ಷೇತ್ರದ ಬಗ್ಗೆ ತಿಳಿದಿದ್ದಿಷ್ಟು.ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್
(ಬೆಳಗಾವಿಯ ಕಿತ್ತೂರು ಮತ್ತು ಖಾನಾಪುರ ಕ್ಷೇತ್ರಗಳೂ ಕೂಡ ಕೆನರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುತ್ತವೆ.)
1947ರಲ್ಲಿ ಸ್ವಾತಂತ್ರ್ಯ ಬಂದರೂ ಭಾಷಾವಾರು ರಾಜ್ಯಗಳು ಅಸ್ತಿತ್ವಕ್ಕೆ ಬಂದಿದ್ದು 1956ರಲ್ಲಿ. 1956ರವರೆಗೆ ಉತ್ತರ ಕನ್ನಡ ಬ್ರಿಟಿಷರ ಆಡಳಿತದಲ್ಲಿದ್ದಂತೆಯೇ ಬಾಂಬೇ ಪ್ರಾಂತ್ಯದಲ್ಲಿತ್ತು. ಅಂದರೆ ಮೊದಲ ಮಹಾಚುನಾವಣೆಯನ್ನು (1951ರಲ್ಲಿ) ಬಾಂಬೇ ಪ್ರಾಂತ್ಯದಡಿಯಲ್ಲಿ ಕೆನರಾ ಕ್ಷೇತ್ರ ಎದುರಿಸಿತು. ಚುನಾವಣೆಯಲ್ಲಿ ಗೆದ್ದವರು ಜೆ.ಪಿ.ಆಳ್ವಾ ಅವರು. ಮುಂದಿನ ಎರಡು ಲೋಕಸಭಾ ಚುನಾವಣೆಗಳಲ್ಲೂ (1957 ಮತ್ತು 1962) ಇವರೇ ಜಯಭೇರಿ ಬಾರಿಸಿ ಹ್ಯಾಟ್ರಿಕ್ ಸಾಧಿಸಿದರು.ಬಾಂಬೇ ಪ್ರಾಂತ್ಯದ "ಸರ್ವೋದಯ" ಯೋಜನೆಗಳೆಲ್ಲ ಅಂಕೋಲೆಯಲ್ಲಿ ಯಶಸ್ವಿಯಾಗಿ ಕಾರ್ಯಗತಗೊಂಡದ್ದು ಇವರು ಪ್ರತಿನಿಧಿಯಾಗಿದ್ದಾಗಲೇ.

ಇವರ
ನಂತರ ಸಂಸತ್ತಿಗೆ ಆಯ್ಕೆಯಾದವರು ಉತ್ತರ ಕನ್ನಡದಲ್ಲಿ ಶಿಕ್ಷಣದ ಕಿಚ್ಚನ್ನು ಹೊತ್ತಿಸಿದ ಮಾನ್ಯ ದಿನಕರ ದೇಸಾಯಿಯವರು. ಯಾವ ಪಕ್ಷದ ಹಂಗಿಲ್ಲದೇ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ದೇಸಾಯಿಯವರು ಸಂಸತ್ತಿನಲ್ಲಿ ಶ್ರೇಷ್ಠ ಶಿಕ್ಷಣತಜ್ಞರಾಗಿಯೂ ಗುರುತಿಸಿಕೊಂಡಿದ್ದರು. ಅಲ್ಲದೇ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕೆಲ ಪಾರ್ಲಿಮೆಂಟರಿ ಸಮಿತಿಗಳ ಸದಸ್ಯರೂ ಆಗಿದ್ದರು. ರೈತರ ಅಭಿವೃದ್ಧಿಗೆ ಸಾಕಷ್ಟು ದುಡಿದ ಇವರು ಲೋಕಸಭೆಯಲ್ಲಿ ತಾವು ಕಂಡದ್ದನ್ನು ತಮ್ಮ ಚುಟುಕುಗಳಲ್ಲಿ ರೀತಿ ಹೇಳುತ್ತಾರೆ.

ಲೋಕಸಭೆಯಲಿ ಹೋಗಿ ನಾ ಕುಳಿತುಕೊಂಡೆ
ದುರ್ಬೀನು ಹಚ್ಚಿ ಇಡಿ ಭಾರತವ ಕಂಡೆ
ಒಂದು ಕಡೆ ಕೋಟಿ ದಶ ಕೋಟಿ ದೌಲತ್ತು
ಉಳಿದ ಕಡೆ ಪಾಪ ಬಾಯಿಗೆ ಇಲ್ಲ ತುತ್ತು.

1971 ರಲ್ಲಿ ದಿನಕರರ ಉತ್ತರಾಧಿಕಾರಿಯಾಗಿ ಬಂದ ಕಾಂಗ್ರೆಸ್ಸಿನ ಬಿ.ವಿ.ನಾಯಕರು ಕೆನರಾ ಕ್ಷೇತ್ರ ಮಾತ್ರವಲ್ಲ ಇಡೀ ರಾಜ್ಯವೇ ಕಂಡ ಮೇಧಾವಿ ಎಂ.ಪಿ.ಗಳಲ್ಲೊಬ್ಬರು. ಅಘನಾಶಿನಿ ನದಿಯ ಗಜನಿ ಭೂಮಿ ಬಿಣಗೆಯ ರಾಸಾಯನಿಕ ಕೈಗಾರಿಕೆಯ ತಿಕ್ಕೆಗೆ ಸರಿದಾಗ ಅದನ್ನು ತಮ್ಮ ಹೋರಾಟದಿಂದ ಕಸಿದು ಪುನಃ ರೈತರಿಗೆ ನೀಡಿದ್ದ ಇವರು ಅತ್ಯಂತ ಸರಳ ವ್ಯಕ್ತಿಯಾಗಿದ್ದರು. ಎಂ.ಪಿ. ಎನ್ನುವ ಅಧಿಕಾರ ಮದ ಎಂದಿಗೂ ಇವರಲ್ಲಿ ಕಾಣಿಸಿಕೊಂಡಿರಲಿಲ್ಲ ಎಂಬುದನ್ನು ಇವರನ್ನು ಬಲ್ಲವರು ಹೇಳುತ್ತಾರೆ. ಇವರು "ಎರಡನೆಯ ಗಣರಾಜ್ಯದತ್ತ", "Future of Global Society" ಎಂಬ ವೈಚಾರಿಕ ಪುಸ್ತಕಗಳನ್ನೂ ಬರೆದು ಇಂದಿಗೂ ತಮ್ಮ ವಿಚಾರಗಳ ಮೂಲಕ ಜನತೆಯಲ್ಲಿ ನೆಲೆಸಿದ್ದಾರೆ. ಕಳೆದ ಮಳೆಗಾಲದ ಸಮಯದಲ್ಲಿ ಇವರು ತೀರಿಕೊಂಡರು.

1977ರಲ್ಲಿ ಆರನೇ ಲೋಕಸಭೆಗೆ ಕ್ಷೇತ್ರದಿಂದ ಆಯ್ಕೆಯಾದವರು ಬಿ.ಪಿ.ಕದಮ್ ರವರು. ಆಗ ಮಾತ್ರ ದೇಶ ತುರ್ತು ಪರಿಸ್ಥಿತಿಯ ಅಸಹ್ಯ ವಾತವರಣದಿಂದ ಹೊರಗೆ ಬಂದಿತ್ತು. ದೇಶದಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಉಂಡು ಜನತಾ ಪಾರ್ಟಿಯ ಮೊರಾರ್ಜಿ ದೇಸಾಯಿಯವರು ಪ್ರಧಾನಮಂತ್ರಿಗಳಾಗಿದ್ದರು.ಕಾಂಗ್ರೆಸ್ ಪರವಾಗಿ ಪಾರ್ಲಿಮೆಂಟ್ ನಲ್ಲಿ ಕೂತ ಕೆಲವೇ ಕೆಲವು ಜನರಲ್ಲಿ ಇವರೂ ಒಬ್ಬರು. ಹಿಂದೆ ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಇವರು ತಮ್ಮ ಜನಮನ್ನಣೆಯಿಂದ ಸಂಸತ್ತಿಗೆ ಬಡ್ತಿಯನ್ನು ಪಡೆದಿದ್ದರು. ಬಿ.ಪಿ.ಕದಮ್ ನಂತರ ಪಾರ್ಲಿಮೆಂತಗೆ ಕಾಲಿಟ್ಟವರು ಸಿದ್ದಾಪುರದ ದೇವರಾಯ ಜಿ. ನಾಯ್ಕರು. 1980ರಲ್ಲಿ ಮೊದಲ ಬಾರಿಗೆ ಸಂಸದರಾದ ಇವರು ಸಮಾಜವಾದಿ ಚಿಂತಕರು. ಪುನಃ 1984,1989 ಹಾಗೂ 1991ರಲ್ಲಿ ಲೋಕಸಭೆಗೆ ಆಯ್ಕೆಯಾದರು. 1989ರಲ್ಲಿ ಇವರ ವಿರುದ್ದ ನಿಂತವರು ಶಿವರಾಮ ಕಾರಂತರು. ಪರಿಸರ ವಿರೋಧಿ ಯೋಜನೆಗಳ ಆಗರ ವಾಗುತ್ತಿರುವ ಉತ್ತರ ಕನ್ನಡವನ್ನು ಉಳಿಸಲು ಹಾಗೂ ಕೈಗಾ ಯೋಜನೆ ಉತ್ತರ ಕನ್ನಡದಲ್ಲಿ ಬೇರು ಬಿಡುವುದನ್ನು ತಡೆಯಲು ಪಕ್ಷೇತರರಾಗಿ ಇವರು ನಿಂತಿದ್ದರು.ಆದರೆ ಇವರ ಪ್ರಕೃತಿ ಪ್ರೀತಿಗೆ ಸ್ಪಂದಿಸದ ನಾವು ಪ್ರತೀ ಹತ್ತು ವೋಟಿಗೆ ಒಂದರಂತೆ ನೀಡಿ ಪರಿಸರದ ಬಗ್ಗೆ ನಮ್ಮ ಕಾಳಜಿಯನ್ನು ಮೆರೆದಿದ್ದೆವು!!!. 'ನಿಮ್ಮ ಸೋಲಿನ ಬಗ್ಗೆ ಏನೆನ್ನುತ್ತೀರಿ' ಎಂದು ಕಾರಂತರನ್ನು ಪತ್ರಕರ್ತರು ಕೇಳಿದಾಗ 'ಇದು ನನಗಾದ ಸೋಲಲ್ಲ. ಇಡೀ ಉತ್ತರ ಕನ್ನಡಕ್ಕಾದ ಸೋಲು' ಎಂದಾಗ ಕೂಡ ಎಚ್ಚರವಾಗದ ಜನತೆ ಇನ್ನೂ ನಮ್ಮ ಉತ್ತರಕನ್ನಡದಲ್ಲಿದ್ದಾರೆ. ಆಗ ಉತ್ತರಕನ್ನಡದ ಸಾಕ್ಷರತೆ ಸುಮಾರು ಶೇ.50 ಆಸುಪಾಸಿನಲ್ಲಿತ್ತು. ಎಲ್ಲ ಸಾಕ್ಷರರೂ ಕನಿಷ್ಠ ಲೋಕವಿವೇಕವನ್ನು ಹೊಂದಿದ್ದರೂ ಕೂಡ ಕಾರಂತರೂ ಅಂದು ಗೆಲ್ಲುತ್ತಿದ್ದರು.ಆದರೆ ಹಾಗಾಗಲಿಲ್ಲ. ನಮ್ಮ ಜಿಲ್ಲೆಯಲ್ಲಿ ತಾಯ(ಪ್ರಕೃತಿ) ಬಗ್ಗೆ ಕಾಳಜಿ ಉಳ್ಳವರು ಕೇವಲು ಹತ್ತರಲ್ಲಿ ಒಬ್ಬರು ಅನ್ನೋದು ಮಾತ್ರ ನಾಚಿಕೆಗೇಡು.

1996ರಲ್ಲಿ ಅನಂತ ಕುಮಾರ ಹೆಗಡೆಯವರು ಸಂಸದರದರು. 1998ರಲ್ಲೂ ಲೋಕಸಭೆಗೆ ಆಯ್ಕೆಯಾದ ಇವರನ್ನು ಸೋಲಿಸಿದ್ದು ಮಾರ್ಗರೇಟ್ ಆಳ್ವಾರವರು 1999ರಲ್ಲಿ. ಕೊನೆಯ ಚುನಾವಣೆಯಲ್ಲಿ ಅಂದರೆ 2004ರಲ್ಲಿ ಗೆದ್ದವರು ಅನಂತ ಕುಮಾರ ಹೆಗಡೆಯವರು. ಹೀಗೆ ಇತ್ತೀಚಿನ ವರ್ಷಗಲಲ್ಲಿ ಅವರು-ಇವರು ಎಂದು ಅಧಿಕಾರ ಪಲ್ಲಟ ಮಾತ್ರ ನಡೆಯುತ್ತಿದೆಯೇ ಹೊರತು ಪರಿಸರವನ್ನು ಗಮನದಲ್ಲಿಟ್ಟುಕೊಂಡು ಆಗುತ್ತಿರು ಅಭಿವೃದ್ಧಿ ಅಷ್ಟಕಷ್ಟೆ.

ಕರುನಾಡಿಗೆ
ವಿದ್ಯುತ್ ನೀಡುತ್ತಿರುವ್ ಜೋಯಿಡಾ ದಿನದಿಂದ ದಿನಕ್ಕೆ ಅಲಕ್ಷಕ್ಕೆ ಒಳಗಾಗುತ್ತಿದೆ.ರಾಷ್ಟ್ರೀಯ ಹೆದ್ದಾರಿಗಳು ಊರು ಕೇರಿಗಳ ಓಣಿಯ ಸ್ಥಿತಿಯನ್ನು ತಲುಪುತ್ತಿವೆ. ಸರ್ಕಾರಿ ಅಧಿಕಾರಿಗಳು ಹೆಚ್ಚು ಹೆಚ್ಚು ಲಂಚಕೋರರಾಗುತ್ತಿದ್ದಾರೆ. ಕಾಡು ಜಿಲ್ಲೆ ಎಂಬ ಅನ್ವರ್ಥಕವಿದ್ದರೂ, "ತಮ್ಮನ್ನು ರಕ್ಷಿಸಿ" ಎಂಬ ಅರಣ್ಯದೇ ಕೂಗೇ ಅರಣ್ಯ ರೋದನವಾಗಿರುವುದು ಜಿಲ್ಲೆಯ ಅತ್ಯಂತ ವಿಪರ್ಯಾಸದ ಸಂಗತಿಯಾಗಿದೆ. ಹಿಂದೆ ಸ್ವಾತಂತ್ರದ ಕಾಲದಲ್ಲಿ ಜನರಲ್ಲಿದ್ದ ಒಗ್ಗಟ್ಟೆಂಬ ಗೋಡೆಯ ಇಟ್ಟಿಗೆಗಳ ಮಧ್ಯೆ 'ಪಕ್ಷ' ಎಂಬ ಮಹಾ ಬಿರುಕು ಎದ್ದಿದೆ. ಜಿಲ್ಲೆಯ ಪ್ರತೀ ಐದಕ್ಕೊಬ್ಬ ಯಾವುದಾದರೂ ಯೋಜನೆಯ ಕರಾಳ ನೆರಳಿನಡಿಯಿದ್ದು, ಲಕ್ಷಾಂತರ ಜನರು ನಿರ್ಗತಿಕರಾಗಿದ್ದಾರೆ.ಅಲ್ಲದೇ ಕೆನರಾ ಕ್ಷೇತ್ರದಡಿಯಲ್ಲಿ ಬೆಳಗಾವಿ ಜಿಲ್ಲೆಯ ಖಾನಪುರ ಮತ್ತು ಕಿತ್ತೂರು ಕ್ಷೇತ್ರಗಳು ಬರುತ್ತವೆ. ಅಲ್ಲಿನ ಜನ ಜೀವನವೂ ಇನ್ನೂ ಸುಧಾರಣೆಯಾಗಬೇಕಿದೆ.ಆರೋಗ್ಯಕ್ಕೆ ಸಂಬಂಧಪಟ್ಟ ಸೌಕರ್ಯಗಳಲ್ಲಿ ನಮ್ಮ ಜಿಲ್ಲೆ ಕರ್ನಾಟಕದ ಅತೀ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ. ಸಮಸ್ಯೆಗಳು ಇವೆ ಎಂದ ಮಾತ್ರಕ್ಕೆ ಅಭಿವೃದ್ಧಿಯೇ ಆಗಿಲ್ಲ ಎಂದಲ್ಲ. ಆದರೆ ನಮ್ಮ ಸಂಸದರು ಮನಸ್ಸು ಮಾಡಿದರೆ ಜನರ ಸ್ಥಿತಿಗತಿಯನ್ನು ಇನ್ನೂ ಉತ್ತಮ ಪಡಿಸಬಹುದು.2005 ಕರ್ನಾಟಕ ಸರ್ಕಾರದ ಮಾನವ ಸಂಪನ್ಮೂಲ ವರದಿಯ ಪ್ರಕಾರ ಆಗಿದ್ದ 27 ಜಿಲ್ಲೆಗಳ ಪೈಕಿ ವಿವಿಧ ಕ್ಷೇತ್ರಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಸ್ಥಾನ ಇಂತಿದೆ.
ಶಿಕ್ಷಣ -5
ಆರೋಗ್ಯ-22
ಆದಾಯ-11
ನಾವು ಹಾಗೂ ಹಲವಾರು ಭರವಸೆಗಳನ್ನು ನೀಡಿ ಲೋಕಸಭೆಗೆ ಹೋಗಿ ಕೂರುವವರು ಪ್ರಯತ್ನಿಸಿದರೆ ನಮ್ಮ ನೆಲವನ್ನು ಇನ್ನೂ ಅಭಿವೃದ್ಧಿಪಡಿಸಬಹುದಾಗಿದೆ.ಅಂದ ಹಾಗೆ ಈ ಬಾರಿ ಮೊದಲ ಬಾರಿ ಮತ ಚಲಾಯಿಸಲು ಮನೆಗೆ ಹೋಗುತ್ತಿದ್ದೇನೆ. ಹಿಂದಿನ ವಿಧಾನಸಭಾ ಉಪಚುನಾವಣೆಯ ಸಮಯದಲ್ಲಿ ನಮ್ಮ ಪರೀಕ್ಷೆಗಳು ನಡೆಯುತ್ತಿದ್ದರಿಂದ ಚೊಚ್ಚಲ ಮತ ಚಲಾವಣೆಯ ಅವಕಾಶವಿದ್ದರೂ ಅದು ಕೈಗೂಡಿರಲಿಲ್ಲ.


No comments: