Tuesday, June 2, 2009

ಅಂಕೋಲೆಯ ಕಡಲತೀರಗಳು

"It may be a fraction.. but still it counts" ಎನ್ನುತ್ತಲೇ ಸ್ವಲ್ಪ ಅಂಕಿ-ಅಂಶಗಳನ್ನು ಹೇಳಿ ಮುಂದೆ ಹೋಗುವೆ. ನಮ್ಮ ದೇಶವು 7516 ಕಿ.ಮೀ.ಗಳಷ್ಟು ಉದ್ದದ ಕಡಲತೀರವನ್ನು ಹೊಂದಿದೆ. ಅದರಲ್ಲಿ ಕರ್ನಾಟಕದ ಪಾಲು 320 ಕಿ.ಮೀ.ಗಳು. ಕರ್ನಾಟಕ ಕರಾವಳಿ ಪ್ರದೇಶವು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಂಚಿಹೋಗಿದೆ. ಉತ್ತರ ಕನ್ನಡದ ಕರಾವಳಿ ಪ್ರದೇಶ 140 ಕಿ.ಮೀ.ಗಳು. ಉತ್ತರ ಕನ್ನಡದ ಒಟ್ಟು 11 ತಾಲೂಕುಗಳಲ್ಲಿ 5 ತಾಲೂಕುಗಳು ಕರಾವಳಿ ತಾಲೂಕುಗಳು. ಅವುಗಳೆಂದರೆ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ. ನಮ್ಮ ಅಂಕೋಲೆಯ ಕರಾವಳಿ ತೀರ ಸುಮಾರು 18.5 ಕಿ.ಮೀ. ಗಳು. ಅಂದ್ರೆ 0.24 ಶೇಕಡಾ :) ಹಾರವಾಡ, ಬೇಲೇಕೇರಿ, ಬಾವಿಕೇರಿ, ಕೇಣಿ, ಅಂಕೋಲ ಪಟ್ಟಣ, ತೆಂಕಣಕೇರಿ, ನದಿಬಾಗ, ಬೆಳಂಬಾರ, ವಾಡಿಬೊಗ್ರಿ, ಹೊನ್ನೆಬೈಲ್, ಮಂಜಗುಣಿ ಊರುಗಳು ಅಂಕೋಲಾ ತಾಲೂಕಿನ ತೀರ ಪ್ರದೇಶವನ್ನು ಹಂಚಿಕೊಂಡಿವೆ. ಅಂಕೋಲೆಯ ಕಡಲ ತೀರ ಪ್ರದೇಶವು ಅನೇಕ ಮಹತ್ವ ಸ್ಥಳಗಳನ್ನು ಹೊಂದಿದೆ.

ಬ್ರಿಟಿಷರ ಕಾಲದಿಂದಲೂ ಉತ್ತಮ ಬಂದರಾಗಿರುವ ಬೇಲೇಕೇರಿಯು ಇಂದು ಕರ್ನಾಟಕದ ೧೦ ಮುಖ್ಯ ಬಂದರುಗಳಲ್ಲಿ ಒಂದು. ಅಲ್ಲದೇ ಉತ್ತಮ ಕಡಲ ಕಿನಾರೆಯನ್ನು ಹೊಂದಿರುವ ಈ ತೀರಕ್ಕೆ “Beach which has a potential of International Tourism” (ಅಂತರಾಷ್ಟ್ರೀಯ ಪ್ರವಾಸಯೋಗ್ಯ ಸಮುದ್ರತೀರ) ಎಂದು ಮಾನ್ಯತೆ ನೀಡಲಾಗಿದೆ. ಕರ್ನಾಟಕದಲ್ಲಿರುವ “ಅ” ಶ್ರೇಣಿಯ ಕೇವಲ ೫ ಸಮುದ್ರದಂಡೆಗಳಲ್ಲಿ ಬೇಲೇಕೇರಿಯೂ ಒಂದು. ಇದು ಕೇವಲ ಉತ್ತಮ ಬಂದರು ಮಾತ್ರವಲ್ಲದೇ ಉತ್ತಮ ಪ್ರವಾಸೀತಾಣವೂ ಆಗಿದ್ದು ಇಲ್ಲಿನ ಸೂರ್ಯಾಸ್ತ ನಯನಮನೋಹರ.
ಬೇಲೇಕೇರಿ

ಹೊನ್ನೆಬೈಲ್ ನ ಸಮುದ್ರದಂಡೆ ಸಹ ಇತ್ತೀಚೆಗೆ “ಹೊನ್ನೆ ಬೀಚ್” ಎಂಬ ಹೆಸರಿನಿಂದ ಪ್ರಸಿದ್ಧವಾಗುತ್ತಿದೆ. ಇತ್ತೀಚೆಗೆ ರೆಸಾರ್ಟ್ ವ್ಯವಸ್ಥೆಯನ್ನು ಕೂಡ ಇಲ್ಲಿ ಪ್ರಾರಂಭಿಸಲಾಗಿದೆ. ಇನ್ನು ಅಂಕೋಲಾ ಪಟ್ಟಣದಿಂದ ಸುಮಾರು 2-3 ಕಿ.ಮೀ.ದೂರದಲ್ಲಿರುವ ನದಿಭಾಗದ ಕಡಲತೀರವೂ ಸಹ ತನ್ನ ಹಾಲ್ನೊರೆಯ ಅಲೆಗಳಿಂದ ಮನಮೋಹಕವಾಗಿದೆ. ಪಕ್ಕದಲ್ಲೇ ಬಸಕಲ್ಲು ಗುಡ್ಡವಿದ್ದು ಅದರ ತುದಿಯಿಂದ ಸಮುದ್ರವನ್ನು ನೋಡಬಹುದು. ಮಳೆಗಾಲದ ಸಮಯದಲ್ಲಿ ಹೆಚ್ಚಿನ ನೀರು ಹೊರಬಂದು "ಕೋಡಿ" ಉಂಟಾಗಿ ಒಂದು ಚಿಕ್ಕ ಹಳ್ಳವನ್ನೇ ನಿರ್ಮಿಸುತ್ತದೆ. ಇದನ್ನು ಗೆಝೆಟಿಯರಗಳಲ್ಲೆಲ್ಲ ಅಂಕೋಲಾ 'ನದಿ'ಯೆಂದು ಕರೆದರೂ ಸಹ ನದಿ ಎಂಬ ಸ್ಥಾನಮಾನ ಸ್ವಲ್ಪ ಹೆಚ್ಚೇ ಆಯಿತೇನೋ ಎಂಬ ಭಾವನೆ ನನ್ನದು. ವಾತದ ಔಷಧಿಗೆ ಹೆಸರುವಾಸಿಯಾಗಿರುವ ಬೆಳಂಬಾರ ಸಹ ಕಡಲತೀರದಲ್ಲಿರುವ ಊರು.ಮೀನುಗಾರಿಕೆಗೆ ಹೆಸರಾದ ಊರು. ಆದರೆ ನಿರಂತರ ಕಡಲ್ಗೊರೆತದ ಕಾರಣ ಪ್ರವಾಸೋದ್ಯಮದ ದೃಷ್ಟಿಯಿಂದ ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆದಿರುವುದಿಲ್ಲ.


ಹೊನ್ನೆ ಬೀಚ್


ಬೆಳಂಬಾರ

"Coastal Ecosystems of the Karnataka State, India" ಪುಸ್ತಕದಲ್ಲಿ ಕರ್ನಾಟಕದ ಎಲ್ಲ ಕಡಲತೀರಗಳ ಜೈವಿಕ ವ್ಯವಸ್ಥೆಯ ಬಗ್ಗೆ ಮಾಹಿತಿಯಿದ್ದು ಎಲ್ಲ ಕಡಲತೀರಗಳನ್ನು ಅವುಗಳ ಗುಣಧರ್ಮಗಳ ಆಧಾರದ ಮೇಲೆ ರೇಟಿಂಗ್ ಮಾಡಲಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಅಂಕೋಲೆಯ ಕಡಲತೀರಗಳ ರೇಟಿಂಗ್ ಇಂತಿದೆ.

ಮಂಜುಗುಣಿ ( ಗಂಗಾವಳಿ ನದಿಯ ಮುಖಜಭೂಮಿ ಇರುವ ಪ್ರದೇಶ) ........B
ಹೊನ್ನೆಬೈಲು..............C
ಬೆಳಂಬಾರ..............E
ನದಿಬಾಗ್.........E (ಪ್ರಾಕೃತಿಕವಾಗಿ ಸುಂದರ ತೀರವಾದರೂ ಕಡಲ್ಗೊರೆತಕ್ಕೆ ತುತ್ತಾಗುತ್ತಿದೆ)
ಬೊಬ್ರುವಾಡ...........E
ಬಾವಿಕೇರಿ.............B
ಬೇಲೇಕೇರಿ................A
ಹಾರವಾಡ.............B

ನದಿಬಾಗ

ದೂರದ ಧಾರವಾಡದಿಂದ ಅಂಕೋಲೆಯನ್ನು ಅರಸುತ್ತ ಇಲ್ಲಿಗೆ ಹರಿದು ಬಂದ ಗಂಗಾವಳಿ ನದಿಯು ಸಮುದ್ರ ಸೇರುವುದು ಅಂಕೋಲಾ ಮತ್ತು ಕುಮಟಾ ತಾಲೂಕುಗಳ ಕಡಲತೀರದ ಸರಹದ್ದಿನಲ್ಲಿ.ಅಷ್ಟೇನೂ ವಿಶಾಲವಲ್ಲದ ಮುಖಜಭೂಮಿ ಕೂಡ ನಿರ್ಮಾಣವಾಗಿದೆ. ಮೀನುಗಾರಿಕೆಗೆ ವಿಪುಲ ಅವಕಾಶವಿದ್ದು ಅನೇಕ ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿದೆ. ಅಲ್ಲದೇ ಕೆಲವು ಊರುಗಳಲ್ಲಿ ಸಮುದ್ರದ ನೀರಿನಿಂದ ಉಪ್ಪನ್ನು ಕೂಡ ತಯಾರಿಸಲಾಗುತ್ತದೆ.ನಾನೂ ಮೊದಲು ಇದು ಮರಳಿನ ರಾಶಿಯೆಂದೇ ತಿಳಿದಿದ್ದೆ!!

ಅಂಕೋಲೆಯ ಉಪ್ಪಿನ ತಯಾರಿಕೆಗೆ ಸುಮಾರು ಇನ್ನೂರರಿಂದ ಮುನ್ನೂರು ವರ್ಷಗಳ ಇತಿಹಾಸವಿದ್ದು ಅನೇಕ ಕುಟುಂಬಗಳಿಗೆ ಆಸರೆಯಾಗಿ ನಿಂತಿದೆ. ಅಲ್ಲದೇ ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ 'ಕರ್ನಾಟಕದ ಬಾರ್ಡೋಲಿ' ಎಂದೆನಿಕೊಂಡ ಅಂಕೋಲೆ ಕರಾವಳಿ ತೀರದಲ್ಲಿಲ್ಲದಿದ್ದರೆ ಈ ಹೆಸರು ಬರುತ್ತಿರಲಿಲ್ಲವೋ ಎನೋ... ಏಕೆಂದರೆ ಅಂಕೋಲೆಯಲ್ಲಿ ಚಳುವಳಿ ಪ್ರಾರಂಭವಾದದ್ದೇ ಉಪ್ಪಿನ ಸತ್ಯಾಗ್ರಹದ ಮೂಲಕ!!

ಹೀಗೆ ಕರಾವಳಿ ಸಂಪತ್ತನ್ನು ಹೊಂದಿರುವ ಅಂಕೋಲೆಯಲ್ಲಿ ಅದು ಸಂಪೂರ್ಣವಾಗಿ ವಿನಿಯೋಗವಾಗುತ್ತಿಲ್ಲ. ಪರಿಸರಕ್ಕೆ, ಜನರಿಗೆ ಹೆಚ್ಚು ಹಾನಿಯಾಗದಂತೆ ಆಧುನೀಕತೆ ತರುವುದು ಕಷ್ಟವಾದರೂ ಸಹ ಅಸಾಧ್ಯವೇನಲ್ಲ. ಅಲ್ಲದೇ ಕೆಲ ಕಡಲತೀರಗಳು ಕಡಲ್ಗೊರೆತಕ್ಕೆ ತುತ್ತಾಗಿರುವುದರಿಂದ ಆ ತೀರಗಳಿಗೂ ಇಂದು ರಕ್ಷಣೆ ಬೇಕಿದೆ.

8 comments:

ರಾಜೇಶ್ ನಾಯ್ಕ said...

ಪ್ರಮೋದ್,
ಮಾಹಿತಿಯುಕ್ತ ಪೋಸ್ಟ್. ನದಿಬಾಗ್ (ಹೊನ್ನೆಕುಡಿ) ಕಡಲ ತೀರಕ್ಕೆ ನಾನು ಭೇಟಿ ನೀಡಿದ್ದೇನೆ. ತುಂಬಾ ಚೆನ್ನಾದ ಸ್ಥಳ. ಇದರ ರೇಟಿಂಗ್ ಅಷ್ಟು ಕೆಳಗೆ ನೋಡಿ ಆಶ್ಚರ್ಯವಾಯಿತು. ಬೇಲೇಕೇರಿ ಬೀಚಿಗೂ ಹೋಗಿದ್ದೇನೆ. ಆದರೆ ಅದು ಸ್ವಲ್ಪನೂ ಇಷ್ಟವಾಗಲಿಲ್ಲ. ಅದರ ರೇಟಿಂಗ್ ನೋಡಿಯೂ ಆಶ್ಚರ್ಯವಾಯಿತು.

ಪ್ರಮೋದ ನಾಯಕ said...

:)..ಹೌದು ನೀವು ಹೇಳುವುದು ನಿಜ.. ನನಗೂ ನದಿಬಾಗ್, ಹೊನ್ನೆಬೈಲ್ ತೀರಗಳ ರೇಟಿಂಗ್ ಗಳನ್ನು ಆ ಪುಸ್ತಕದಲ್ಲಿ ನೋಡಿ ಆಶ್ಚರ್ಯವಾಯಿತು. ಆದರೆ ಪ್ರಾಕೃತಿಕ ಗುಣಧರ್ಮಗಳು, ಮಾನವ ಕುಲದ ಹಸ್ತಕ್ಷೇಪ ಮುಂತಾದುವುಗಳನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಂಡು ರೇಟಿಂಗ್ ಕೊಟ್ಟಿದ್ದಕ್ಕೋ ಏನೋ ಕೆಲ ತೀರಗಳಿಗೆ ಅನ್ಯಾಯವಾದಂತೆ ತೋರುವುದು ಸಹಜ.

shivu said...

ಪ್ರಮೋದ್,

ತುಂಬಾ ಉಪಯುಕ್ತವಾದ ಚಿತ್ರಸಹಿತ ಲೇಖನವನ್ನು ಬರೆದಿದ್ದೀರಿ...ಅಂಕಿಅಂಶಗಳ ಸಮೇತ ವಿವರಿಸಿರುವ ಉತ್ತರ ಕನ್ನಡ ಜಿಲ್ಲೆಯ ಕಡಲತೀರಗಳು ಮತ್ತೊಮ್ಮೆ ನೋಡಬೇಕಿನಿಸುವಷ್ಟರ ಮಟ್ಟಿಗೆ ಆಸೆ ಹುಟ್ಟಿಸುತ್ತವೆ...

ಈ ಮೊದಲು ಹೋಗಿದ್ದರೂ ಇನ್ನೊಮ್ಮೆ ಹೋಗಬೇಕೆನಿಸುತ್ತದೆ...

ನಾನು ಛಾಯಾಗ್ರಾಹಕ..ಬಿಡುವಾದಾಗ ನನ್ನ ಬ್ಲಾಗಿಗೂ ಬನ್ನಿ...

http://chaayakannadi.blogspot.com/

ಸಿಮೆಂಟು ಮರಳಿನ ಮಧ್ಯೆ said...

ಪ್ರಮೋದ್...

ಫೋಟೊ ಲೇಖನ ತುಂಬಾ ಚೆನ್ನಾಗಿದೆ...

ಮತ್ತೊಮ್ಮೆ ಇಲ್ಲೆಲ್ಲ ಹೋಗಿ ಬರೋಣ ಅನಿಸುತ್ತಿದೆ...

ಅಭಿನಂದನೆಗಳು...

ಪ್ರಮೋದ ನಾಯಕ said...

ಶಿವು ಸರ್ ಹಾಗೂ ಪ್ರಕಾಶಣ್ಣ, ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ಕರಾವಳಿ ಸೌಂದರ್ಯವೇ ಹಾಗೇ..ಊರಿಗೆ ಹೋದಾಗಲೆಲ್ಲ ಮುಸ್ಸಂಜೆ ಹೊತ್ತಲ್ಲಿ ಹಾಗೆ ಒಂದು ರೌಂಡು ಹೊಡೆದು ಬಂದ್ರೆ ಅದೆಷ್ಟೋ ಖುಷಿ ಮನಸ್ಸಿಗೆ...ಇನ್ನೊಮ್ಮೆ ಬನ್ನಿ ಕನ್ನಡ ಕರಾವಳಿ ಕಡೆಗೆ...

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಮೋದ್,
ನಿಮ್ಮೂರ ಸೊಬಗನ್ನು ಸೊಗಸಾಗಿ ಚಿತ್ರಿಸಿದ್ದೀರಿ. ಹೋಗಲು ಆಸೆಯಾಗಿದೆ.

ಪ್ರಮೋದ ನಾಯಕ said...

ಡಿ.ಜಿ.ಯವರೆ,
ಧನ್ಯವಾದಗಳು...ಬನ್ನಿ ಒಮ್ಮೆ ಅಂಕೋಲೆಯ ಕಡೆಗೆ....

pummy said...

Am very happy to b an ankoliga....ondu kade sayadri ,ondu kade kadlo,
Nadumadyadali adike tengugal madilo...........