Monday, May 4, 2009

ಕರ್ಣಾಟಕ ಸಂಘ ಗ್ರಂಥಾಲಯ,ಗೋಕರ್ಣ

ಪ್ರತಿ ಬಾರಿ ಊರಿಗೆ ಹೋಗುವಾಗಲೂ ಆ ಬಾರಿ ಎಲ್ಲೆಲ್ಲಿ ಹೋಗಬೇಕು ಎಂಬ ಲಿಸ್ಟಂತೂ ಬ್ಯಾಗ್ ನಲ್ಲಿರುತ್ತದೆ. ಮೊನ್ನೆ ಚುನಾವಣೆ ಸಮಯದಲ್ಲಿ ಹೋದಾಗ ಕೂಡ ಗೋಕರ್ಣದಲ್ಲಿ ಕರ್ಣಾಟಕ ಸಂಘದ ಲೈಬ್ರರಿಗೆ ಒಮ್ಮೆ ಹೋಗಿ ಬರಬೇಕು ಎಂಬುದನ್ನು ನಿರ್ಧರಿಸೇ ಹೊರಟಿದ್ದೆ. ಗೋಕರ್ಣವೆಂದರೆ ಮೊದಲು ನೆನಪಿಗೆ ಬರುವುದು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ. (ಈಗೀಗ ಓಮ್ ಬೀಚ್, ಕುಡ್ಲೆ ಬೀಚ್ ಗಳ ಪ್ರಸಿದ್ಧಿ ಗೋಕರ್ಣವೊಂದು ತೀರ್ಥಕ್ಷೇತ್ರವೂ ಹೌದು ಎಂಬುದನ್ನು ಮರೆಸುತ್ತಿರುವುದು ಬೇರೆ ಮಾತು). 'ದಕ್ಷಿಣ ಕಾಶಿ' ಎಂದೇ ಪ್ರಸಿದ್ದಿ ಪಡೆದಿರುವ ಗೋಕರ್ಣ ನಮ್ಮನೆಯಿಂದ ಅಬ್ಬಬ್ಬಾ ಅಂದ್ರೆ 30 ರಿಂದ 35 ಕಿ.ಮೀ.ಗಳಷ್ಟು ದೂರದಲ್ಲಿದೆ. ಹಲವಾರು ಬಾರಿ ಆ ಕಡೆ ಹೋಗಿದ್ದರೂ ಅಲ್ಲೊಂದು ಹಳೆಯ ಗ್ರಂಥಾಲಯವಿದೆ ಎಂಬುದು ತಿಳಿದಿರಲಿಲ್ಲ. ಕೆಲವು ದಿನಗಳ ಹಿಂದೆ ಕರ್ನಾಟಕ ಗೆಝೆಟಿಯರ್ ನಲ್ಲಿ ಕರ್ನಾಟಕದ ಕೇಂದ್ರ ಗ್ರಂಥಾಲಯದ ನಂತರ ಗೋಕರ್ಣದ ಕರ್ಣಾಟಕ ಸಂಘದ ಗ್ರಂಥಾಲಯವನ್ನು ಉಲ್ಲೇಖಿಸಿದ್ದನ್ನು ನೋಡಿ ನಮ್ಮ ಗೋಕರ್ಣದಲ್ಲಿಯೂ ಉತ್ತಮ ಗ್ರಂಥಾಲಯವೊಂದಿದೆ ಎಂದು ತಿಳಿಯಿತು. ಕಾಲೇಜಿನಲ್ಲಿ ನನ್ನ ಸಹಪಾಠಿಯಾಗಿರುವ ಗೋಕರ್ಣದ ಗಣಪತಿ ಭಟ್ಟನಲ್ಲಿ ವಿಚಾರಿಸಿದಾಗ "ಹೌದು ಇದೆ. ಆದರೆ ಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಈಗ ಓದುಗರು ಬರುವುದು ಕೂಡ ಕಡಿಮೆ.ಖ್ಯಾತ ನಿರ್ದೇಶಕ ಸುನಿಲ್ ಕುಮಾರ ದೇಸಾಯಿಯವರೂ ಕೂಡ ಅಲ್ಲಿಗೆ ಬಂದು ಅನೇಕ ಹಳೆಯ ಕಾದಂಬರಿಗಳನ್ನು ಓದಿ ಹೋಗಿದ್ದಾರಂತೆ' ಎಂದು ತನ್ನ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದ.

ಮತದಾನದ ದಿನ ನನ್ನ ಹಕ್ಕನ್ನು ಚಲಾಯಿಸಿ ಗೋಕರ್ಣದ ಕಡೆಗೆ ಹೊರಟೆ. ಗೋಕರ್ಣದ ದಾರಿಯಲ್ಲೇ ಗೆಳೆಯ ಪವನನ ಮನೆಯೂ ಕೂಡ. ಅವನನ್ನು ಕರೆದುಕೊಂಡು ಗೋಕರ್ಣಕ್ಕೆ ತಲುಪಾಯಿತು. 'ತಮ್ಮ ಮನೆಯ ಮುಂದಿನ ಇನ್ನೊಂದು ಬದಿಯಲ್ಲೇ ಆ ಲೈಬ್ರರಿಯಿರುವುದು ಎಂದು ಗಣಪತಿ ಹೇಳಿ ಕಳುಹಿಸಿದ್ದು ಒಳ್ಳೆಯದೇ ಆಗಿತ್ತು. ಇಲ್ಲದಿದ್ದರೆ ಅದನ್ನು ಹುಡುಕುವುದು ಕಷ್ಟವೇ !! ಕಿರಿದಾದ ಮನೆಯ ಮಾಳಿಗೆಯ ಮೇಲೆ ಗ್ರಂಥಾಲಯವಿದೆ.ಒಳಗೆ ಹೋದೊಡನೆ ರಾಶಿ ರಾಶಿ ಪುಸ್ತಕಗಳು. 'ಗ್ರಂಥಾಲಯದಲ್ಲಿ ಪುಸ್ತಕಗಳಲ್ಲದೇ ಮತ್ತೇನನ್ನು ಕಾಣುವಿರಿ ?'  ಎಂದು ನೀವು ಕೇಳಬಹುದು. ಆದರೆ ಸಾಮಾನ್ಯವಾಗಿ ಎಲ್ಲ ಗ್ರಂಥಾಲಯಗಳಲ್ಲಿ ಓಡಾಡಲು ಸಾಕಷ್ಟು ಜಾಗವಿದ್ದು ನಿರ್ದಿಷ್ಟ ಜಾಗದಲ್ಲಿ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಜೋಡಿಸಿಟ್ಟಿರುತ್ತಾರೆ. ಆದರೆ ಇಲ್ಲಿ ಹಾಗಲ್ಲ. ಕೆಲವು ಕಪಾಟುಗಳನ್ನು ಬಿಟ್ಟರೆ ಇನ್ನು ಉಳಿದೆಡೆ ಸಿಕ್ಕ ಸಿಕ್ಕಲ್ಲಿ ಪುಸ್ತಕಗಳು. ನಾನೇನು ಈ ಗ್ರಂಥಾಲಯವನ್ನು ತೆಗಳುತ್ತಿಲ್ಲ. ಆದರೆ ಒಂದು ಕಾಲದಲ್ಲಿ 400ಕ್ಕೂ ಹೆಚ್ಚು ನಿಯತಕಾಲಿಕಗಳು ಬರುತ್ತಿದ್ದ ಗ್ರಂಥಾಲಯದ ಇಂದಿನ ಸ್ಥಿತಿಯಿದು. ಗ್ರಂಥಪಾಲಕರಾದ ಜಿ.ಎಮ್.ವೇದೇಶ್ವರರನ್ನು ಕೇಳಿದಾಗ 'ಇದೊಂದು ಖಾಸಗಿ ಲೈಬ್ರರಿ. ಹಿಂದೆಲ್ಲ ಓದುಗರ ಸಂಖ್ಯೆಯೂ ಹೆಚ್ಚಾಗಿತ್ತು. ಆದರೆ ಈಗ ಓದುಗರೂ ಕಡಿಮೆ. ಇಲ್ಲಿರುವ ಬಹುತೇಕ ಪುಸ್ತಕಗಳು ಗೌರವ ಪ್ರತಿಗಳೇ. ಇಂದಿಗೂ ಅನೇಕ ಗೌರವ ಪ್ರತಿಗಳು ಬರುತ್ತಿವೆ. ಆದರೆ ಅವುಗಳನ್ನಿಡಲು ಸ್ಥಳವೆಲ್ಲಿದೆ?ಮನೆಯಲ್ಲಿ ಇನ್ನೂ ಇಪ್ಪತ್ತರಿಂದ ಇಪ್ಪತೈದು ಕಪಾಟುಗಳಷ್ಟು ಪುಸ್ತಕಗಳಿವೆ. ಆದರೆ ಇಡಲು ಸ್ಥಳದ ಅಭಾವ. ಆದ್ದರಿಂದ ಈಗ ಗೌರವ ಪ್ರತಿಗಳನ್ನೂ ಕಳುಹಿಸುವುದು ಬೇಡ ಎಂದೇ ತಿಳಿಸಲಾಗಿದೆ !!' ಎಂದು ಹೇಳಿದರು. 

ಕಡಿಮೆಯೆಂದರೂ ಒಂದರಿಂದ ಒಂದೂವರೆ ಲಕ್ಷಗಳಷ್ಟು ಪುಸ್ತಕಗಳನ್ನು ಹೊಂದಿರುವ ಈ ಗ್ರಂಥಾಲಯದಲ್ಲಿ ಹಿಂದೆ ಉತ್ತರ ಕನ್ನಡದಿಂದ ಹೊರಡುತ್ತಿದ್ದ ಅನೇಕ ನಿಯತಕಾಲಿಕಗಳೂ ಇವೆ. ಹೆಚ್ಚಾಗಿ ಕಾದಂಬರಿ, ಸಂಸ್ಕೃತ ವಿಷಯಕ್ಕೆ  ಸಂಬಂಧಿಸಿದ ಪುಸ್ತಕಗಳು ಇಲ್ಲಿದ್ದು ಕರ್ನಾಟಕದ ಇನ್ಯಾವ ಲೈಬ್ರರಿಯಲ್ಲಿ ದೊರಕದ ಹಳೇ ಪುಸ್ತಕಗಳನ್ನು ಹೊಂದಿರುವ ಈ ಗ್ರಂಥಾಲಯದ ಕ್ಯಾಟಲೋಗ್ (ಪುಸ್ತಕಗಳ ಯಾದಿ) ರೆಕಾರ್ಡ ಪುಸ್ತಕಗಳೇ ಐವತ್ತಕ್ಕಿಂತ ಹೆಚ್ಚಿವೆ ಎಂದರೆ ಅದೆಷ್ಟು ಪುಸ್ತಕಗಳಿವೆಯೆಂದು ಅಂದಾಜಿಸಬಹುದಾಗಿದೆ. ಆದರೆ ಗ್ರಂಥಾಲಯದ ಮುಖ್ಯ ಕೊರತೆಯೆಂದರೆ ಪುಸ್ತಕದ ಯಾದಿಯ ಮೂಲಕ ಪುಸ್ತಕ ಗ್ರಂಥಾಲಯದಲ್ಲಿಯೇ ಇದೆ ಎಂಬುದು ತಿಳಿದರೂ ಅದು ಎಲ್ಲಿದೆ ? ಯಾವ ಕಪಾಟಿನಲ್ಲಿದೆ?  ಎಂಬುದನ್ನು ಹುಡುಕುವುದು ಕಷ್ಟ. ಹೀಗೆ ಹಿಂದೊಮ್ಮೆ ಕರ್ನಾಟಕದ ಮುಖ್ಯ ಗ್ರಂಥಾಲಯಗಳಲ್ಲಿ ಒಂದೆಂದು ಗುರುತಿಸಿಕೊಂಡಿದ್ದ ಗ್ರಂಥಾಲಯ ಇಂದು ಸ್ಥಳದ ಹಾಗೂ ವ್ಯವಸ್ಥೆಯ ಕೊರತೆಯಿಂದಾಗಿ ಲಕ್ಷಗಟ್ಟಲೇ ಪುಸ್ತಕಗಳು ಕಾಲಗರ್ಭದಲ್ಲಿ ಮರೆಯಾಗಲು ಸಿದ್ಧವಾಗಿವೆ. ಈ ಗ್ರಂಥಾಲಯ ಖಾಸಗಿ ಗ್ರಂಥಾಲಯವಾಗಿದ್ದರಿಂದ ಎನೋ ಸರಕಾರದ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿರಬಹುದು. ಆದರೆ 'ಪಬ್ಲಿಕ್ ಯುನಿವರ್ಸಿಟಿ' ಎಂದೇ ಕರೆಸಿಕೊಳ್ಳುವ ಇಂತಹ ಗ್ರಂಥಾಲಯಗಳನ್ನು ನವೀಕರಣಗೊಳಿಸಿದ್ದಲ್ಲಿ ಮಾತ್ರ ಜ್ಞಾನ ಪೀಳಿಗೆಯಿಂದ ಪೀಳಿಗೆಗೆ ವರ್ಗವಾಗಲು ಸಾಧ್ಯ. 

ಒಟ್ಟಿನಲ್ಲಿ ಹಳೆಯ ಲೈಬ್ರರಿಗೊಂದು ಹೋಗಿ ಬಂದ ಖುಷಿಯಿದ್ದರೂ ಮನೆಯಿಂದ ಹೊರಡುವಾಗ ಸಾಧ್ಯವಾದರೆ ನನಗೆ ಬೇಕಾದ ಕೆಲ ಪುಸ್ತಕಗಳ ಬಗ್ಗೆ ವಿಚಾರಿಸಿ ಬರಬೇಕೆಂದು ಮನಸ್ಸಿನಲ್ಲಿ ಅಂದುಕೊಂಡು ಹೋಗಿದ್ದ ನನಗೆ ಆ ಪುಸ್ತಕಗಳು ಅಲ್ಲಿದ್ದರೂ ಸಿಕ್ಕಿರಲಿಲ್ಲ.


3 comments:

shivu said...

ಪ್ರಮೋದ್ ನಾಯಕ್,

ನೀವು ನನ್ನ ಬ್ಲಾಗಿಗೆ ಬಂದು ನಮ್ಮ ಟಿ.ವಿ. ಸಂದರ್ಶನವನ್ನು ನೋಡಿದ್ದು ನನಗೆ ಖುಷಿಯಾಯಿತು....ಹಾಗೆ ನಿಮ್ಮ ಬ್ಲಾಗಿಗೆ ಬಂದೆ....ನಿಮ್ಮ ಬರವಣಿಗೆ ಚೆನ್ನಾಗಿದೆ...
ಗ್ರಂಥಾಲಯದ ಬಗ್ಗೆ ಉತ್ತಮ ಮಾಹಿತಿಯನ್ನು ಕೊಟ್ಟಿದ್ದೀರಿ...ಗೋಕರ್ಣದಲ್ಲಿ ಒಂದು ಇಂಥ ದೊಡ್ಡ ಗ್ರಂಥಾಲಯವಿದೆಯೆಂದು ಗೊತ್ತಿರಲಿಲ್ಲ...ನಿಮ್ಮ ಕಾಳಜಿ ಇಷ್ಟವಾಯಿತು...ಮತ್ತೆ ನನ್ನ ಬ್ಲಾಗಿನ ಹೊಸ ಲೇಖನಗಳನ್ನು ಓದಿರಿ..ನಿಮಗಿಷ್ಟವಾಗಬಹುದು...ಇಷ್ಟವಾದರೆ ಕಾಮೆಂಟಿಸಿ...ಧನ್ಯವಾದಗಳು...

ಬಿಡುವು ಮಾಡಿಕೊಂಡು ನಿಮ್ಮ ಉಳಿದ ಲೇಖನಗಳನ್ನು ಓದುತ್ತೇನೆ...

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಮೋದ್,
ವೇದೇಶ್ವರ ಅವರು ಪುಸ್ತಕವೊಂದನ್ನು ಸಂಪಾದಿಸಿದ್ದಾರೆ. ಹಲವಾರು ಪ್ರಮುಖ ವ್ಯಕ್ತಿಗಳು ಅವರಿಗೆ ಬರೆದಿರುವ ಪತ್ರಗಳನ್ನು ಅದರಲ್ಲಿ ಅವರದೇ ಹಸ್ತಾಕ್ಷರದಲ್ಲಿ ಚಿತ್ರಗಳೊಂದಿಗೆ ಪ್ರಕಟವಾಗಿದೆ. ನನ್ನ ಬಳಿ ಇದೆ. ನೀವು ವೇದೇಶ್ವರರ ಫೋಟೋ ತೆಗೆದು ಹಾಕಬೇಕಿತ್ತು. ಅವರೊಬ್ಬ ಅಪರೂಪದ ವ್ಯಕ್ತಿ.

ಪ್ರಮೋದ ನಾಯಕ said...

ಶಿವು ಸರ್ ,
ಧನ್ಯವಾದಗಳು..

ಮಲ್ಲಿಕಾರ್ಜುನ್ ಸರ್,
ಹೌದು. ವೇದೇಶ್ವರ್ ಅcಅರು ಅಪರೂಪದ ವ್ಯಕ್ತಿ.. ಯಾವ ಪ್ರತಿಫಲಾಪೇಕ್ಷೆಯಿಲ್ಲದೇ ಸೇವೆ ಮಾಡುತ್ತಿರುವ ಇವರು ಹುಟ್ಟುಹಾಕಿಕೊಂಡು ಬಂದಿರುವ 'ಸ್ಟಡಿ ಸರ್ಕಲ್' ಈಗ ಮಾತ್ರ ಶೋಚನೀಯ ಸ್ಥಿತಿಯಲ್ಲಿರುವುದು ಮಾತ್ರ ವಿಷಾದದ ಸಂಗತಿ.. ಹಿಂದೆ ಈ ಗ್ರಂಥಾಲಯ ಕಂಡಿದ್ದ ವೈಭವದ ದಿನಗಳನ್ನು ಸಪ್ಪೆ ಮೋರೆಯಿಂದಲೆ ನೆನೆಯುತ್ತ "ಈಗ ಇವೆಲ್ಲವುಗಳನ್ನು ಓದುವವರು ಯಾರಿದ್ದಾರೆ? " ಎಂದರು. ಮುಂದಿನ ಬಾರಿ ಊರಿಗೆ ಹೋದಾಗ ಸಾಧ್ಯವಾದರೆ ಅವರ ಫೋಟೊವನ್ನು ತರುವೆ..