Thursday, June 18, 2009

ಹಿಚ್ಕಡ ಕುರ್ವೆ

ಅಂಕೋಲೆಯ ಕಡೆ ಮಳೆ ಜೋರಾಗಿ ನಾಲ್ಕಾರು ದಿನ ಬಿತ್ತೆಂದರೆ ಪ್ರಚಾರಕ್ಕೆ ಬರುವ ಸ್ಥಳವೆಂದರೆ ಕುರ್ವೆ, ಒಂದು ಚಿಕ್ಕ ದ್ವೀಪ. ಅಂಕೋಲೆಯ ಗಂಗೆ ಗಂಗಾವಳಿ(ಗೆಳೆಯ ತೇಜುವಿನ ಹೊಸ ನಾಮಕರಣ 'ನಮ್ ಗಂಗು') ನದಿ ಧಾರವಾಡದ ಹತ್ತಿರ ಆಗಮಿಸಿ ಅಂಕೋಲಾ ಮತ್ತು ಕುಮಟಾ ತಾಲೂಕಿನ ಸರಹದ್ದಿನಲ್ಲಿ ಅರಬ್ಬೀ ಸಮುದ್ರ ಸೇರುತ್ತದೆ. ನದಿಯ ಮುಖಜಭೂಮಿಯಿಂದ 4 ಕಿ.ಮೀ. ಹಿಂದೆ ವಜ್ರಾಕಾರದ ಈ ಪುಟ್ಟ ದ್ವೀಪವಿದೆ. ನದಿ ಮಧ್ಯದಲ್ಲಿರುವ ಇಂತಹ ಚಿಕ್ಕ ದ್ವೀಪಗಳಿಗೆ ಸಾಮಾನ್ಯವಾಗಿ 'ಕುರ್ವೆ' ಎನ್ನುತ್ತಾರೆ. ಉತ್ತರ ಕನ್ನಡದಲ್ಲಿ ಅಘನಾಶಿನಿ ನದಿಯ ಐಗಳ ಕುರ್ವೆ, ಶರಾವತಿ ನದಿಯ ಮಾವಿನಕುರ್ವೆ ಹೀಗೆ ನಾಲ್ಕಾರು ಪ್ರಸಿದ್ದವಾದ ಕುರ್ವೆಗಳಿವೆ. ಸಾಮಾನ್ಯವಾಗಿ ಸಮೀಪದಲ್ಲಿರೋ ಊರ ಹೆಸರಿನಿಂದಲೋ ಅಥವಾ ಅಲ್ಲಿ ವಾಸಿಸುವ ಜನಾಂಗದ ಹೆಸರಿನಿಂದಲೇ ಆ ಕುರ್ವೆಯನ್ನು ಕರೆಯಲಾಗುತ್ತದೆ. ನಮ್ಮ ಈ ಕುರ್ವೆಯ ಸಮೀಪದಲ್ಲಿ ಹಿಚ್ಕಡ ಎಂಬ ಊರು ಇರುವುದರಿಂದ ಇದನ್ನು 'ಹಿಚ್ಕಡ ಕುರ್ವೆ' ಎಂದು ಕರೆಯುತ್ತಾರೆ.





ಸುಮಾರು 44 ಎಕರೆ ವಿಸ್ತೀರ್ಣದ ಈ ನಡುಗಡ್ಡೆಯ ತುಂಬ ತೆಂಗಿನಮರಗಳು ಇವೆಯೆಂದು ಕೇಳಿದ್ದೆ. ಮೊನ್ನೆ ಮೇ ತಿಂಗಳ ಕೊನೆಯಲ್ಲಿ ಮನೆಗೆ ಹೋದಾಗ ಅಲ್ಲಿಗೆ ಹೋಗಿಬಂದಾಯಿತು.. ಈ ಹಿಂದೆ ಚಿಕ್ಕವನಿರುವಾಗ ಕಾಳಿನದಿಯಲ್ಲಿ ಮರದ ದೋಣಿಯಲ್ಲಿ ಹೋಗಿದ್ದನ್ನು ಬಿಟ್ಟರೆ ಇನ್ನೆಲ್ಲ ಕಡೆ ನದಿ ದಾಟುವಾಗ ಯಾಂತ್ರೀಕೃತ ಬಾರ್ಜಲ್ಲೇ ಹೋಗಿದ್ದು.. ಆದ್ದರಿಂದ ಸುಮಾರು ಒಂದು ದಶಕದ ನಂತರ ಪುನ: ಮರದ ಚಿಕ್ಕ ದೋಣಿಯಲ್ಲು ಹೋಗುವ ಅವಕಾಶ ಸಿಕ್ಕಿತ್ತು..ಕಾಳಿನದಿಯ ಆ ದೋಣಿಗಳಾದರೂ ಸುಮಾರು 12 ರಿಂದ 16 ಜನರನ್ನು ಕೊಂಡೊಯ್ಯುವ ಸಾಮರ್ಥ್ಯವುಳ್ಳವಾದ್ದರಿಂದ ಆ ದೋಣಿಗಳ ಮೇಲೆ ಹೋಗಲು ಅಷ್ಟೊಂದು ಭಯವಾಗುತ್ತಿರಲಿಲ್ಲ. ಆದರೆ ಈ ಪುಟ್ಟ ದೋಣಿಯ ಮೇಲೆ ಹೆದರುತ್ತಲೇ ನಾನು ಮತ್ತು ತೇಜು ಕುರ್ವೆ ಕಾಲಿಟ್ಟಾಯಿತು.. ನದಿ ಮಧ್ಯದಲ್ಲಿ ಸಾಗುವಾಗ ದೂರದಲ್ಲಿನ ಗಂಗಾವಳಿ ರೈಲ್ವೆ ಬ್ರಿದ್ಜು , ನದಿ ಇನ್ನೊಂದು ತೀರದಲ್ಲಿರುವ ಇನ್ನು ಕೆಲ ಹಳ್ಳಿಗಳು ಕಣ್ಣಿಗೆ ಮುದ ನೀಡುತ್ತಿದ್ದವು. ಕೆಲ ನಿಮಿಷಗಳಲ್ಲೇ ಕುರ್ವೆ ದಡ ತಲುಪಿದರೂ ಸಹ ಪುನಃ ಮನೆಗೆ ಹೋಗುವಾಗ ಆ ಪುಟ್ಟ ದೋಣಿಯ ಮೇಲೆ ಹೋಗಬೇಕೆಂಬ ಭಯ ನನಗೆ..

ತೆಂಗಿನ ತೋಟಗಳಿಂದಲೇ ತುಂಬಿದ ಕುರ್ವೆಯಲ್ಲಿ ಸುಮಾರು ಇಪ್ಪತ್ತೈದು ಕುಟುಂಬಗಳಿದ್ದು ಒಂದು ಶಾಲೆ ಇದೆ. ವಿದ್ಯುತ್ತಿನ ಸಂಪರ್ಕ ಕೂಡ ಇದೆ. ತೋಟಗಾರಿಕೆ ಮತ್ತು ಮೀನುಗಾರಿಕೆಯ ಮೇಲೆ ಇಲ್ಲಿನ ಜನ ಅವಲಂಬಿಸಿದ್ದಾರೆ. ಅಲ್ಲಲ್ಲಿ 'ಪಾರ್ಕಿಂಗ್' ಮಾಡಿದ ದೋಣಿಗಳೂ ಕೂಡ ಕಣ್ಣಿಗೆ ಬೀಳುತ್ತಿದ್ದು ಕೆಲವೆಡೆ 'ಕಲ್ಗ' ಎನ್ನೋ ವಿಶೇಷವಾದ ಜೀವಿಗಳಿರೋ ಕಲ್ಲುಗಳು (ಊರ ಕಡೆ ಈ ಕಲ್ಲುಗಳನ್ನು ಕಲ್ಗನ ಮುಯ್ಡು ಎನ್ನುತ್ತಾರೆ) ಕಾಣಸಿಗುತ್ತಿದ್ದವು. ಕೆಲ ತೆಂಗಿನಮರಗಳು ದಂಡೆಯಿಂದ ನಭದೆಡೆಗೆ ನೆಗೆಯುತ್ತಿದ್ದಂತೆ ಭಾಸವಾಗುತ್ತಿದ್ದರೆ ಇನ್ನು ಕೆಲವು ನದಿ ನೀರನ್ನು ಚುಂಬಿಸಲು ಹವಣಿಸುತ್ತಿದ್ದಂತೆ ಅನಿಸುತ್ತಿತ್ತು.





ಇನ್ನು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಈ ದ್ವೀಪವನ್ನು ಚಳುವಳಿಗಾರರು ಭೂಗತವಾಗುವುದಕ್ಕೆ ಬಳಸಿಕೊಳ್ಳುತ್ತಿದ್ದರಂತೆ. ಈ ನಡುಗಡ್ಡೆಯಲ್ಲಿರುವಾಗ ಗಂಗಾವಳಿ ನಮ್ಮನ್ನು ಸುತ್ತುವರೆದಿದ್ದರಿಂದ "ನಾ ಖೈದಿ ನೀನೆ ಸೆರೆಮನೆ" ಎಂಬ ಮುಂಗಾರುಮಳೆಯ ಲೈನ್ ನೆನಪಿಗೆ ಬರುತಿತ್ತು. ಸಂಜೆಯ ವಿಹಾರಕ್ಕೆ ಹೇಳಿ ಮಾಡಿಸಿದಂತಿರುವ ಈ ಸ್ಥಳದ ಬಗ್ಗೆ ಪ್ರೊ.ಜಿ.ಎಚ್.ನಾಯಕರು "ಪ್ರಕೃತಿಯೇ ಸೌಂದರ್ಯದ ಚಿತ್ರ ಬಿಡಿಸಿದಂತೆ ಇದೆ ಸುತ್ತಮುತ್ತಲಿನ ವಾತಾವರಣ" ಎಂದು ಒಂದೆಡೆ ಬರೆದಿದ್ದಾರೆ. ಆದರೆ ಇಲ್ಲಿನ ಜನರು ತೊಂದರೆಗೊಳಗಾಗುವುದು ಮಳೆಗಾಲದಲ್ಲಿ. ಭಾರೀ ಮಳೆ ಸುರಿಯಿತೆಂದರೆ ಸಾಕು ನಮ್ ಗಂಗುವಿನ ನೀರಿನ ಮಟ್ಟವೇರಿ ಈ ದ್ವೀಪ ಮುಳುಗಲು ಪ್ರಾರಂಭವಾಗುತ್ತದೆ. ಆಗ ಇಲ್ಲಿನ ಜನರಿಗೆ ಆಶ್ರಯ ನೀಡುವ ಸ್ಥಳಗಳೆಂದರೆ ಎಡ ದಂಡೆಯ ಮೇಲಿರುವ ಹಿಚ್ಕಡ ಊರಿನ ಗಂಜಿಕೇಂದ್ರ ಹಾಗೂ ಬಲ ದಂಡೆಯ ಮೇಲಿರುವ ಅಗ್ಗರಗೋಣ ಅಥವಾ ಸಗಡಗೇರಿ ಶಾಲೆಯಲ್ಲಿ ಶುರುಮಾಡುವ ಗಂಜೀಕೇಂದ್ರಗಳು..ಇನ್ನೊಮ್ಮೆ ಮಳೆಗಾಲ ಪ್ರಾರಂಭವಾಗಿದೆ. ನಮ್ ಗಂಗು ಎನಾದರೂ ಮೈತುಂಬ ಹರಿದರೆ ಮತ್ತೆ ಇಲ್ಲಿನ ಜನರಿಗೆ ಕಷ್ಟ ತಪ್ಪಿದ್ದಲ್ಲ. ಕಳೆದ ಬಾರಿಯೂ ಕುರ್ವೆಯನ್ನು ಮುಳುಗಿಸಿ ಮಂತ್ರಿಗಳೇ ಆಶ್ರಯ ತಾಣಗಳಿಗೆ ಬರುವಂತೆ ಮಾಡಿದ್ದ ನಮ್ ಗಂಗು ಈ ಬಾರಿಯಾದರೂ ಇಲ್ಲಿನ ಜನರ ಮೇಲೆ ಕೃಪೆ ತೋರುವಳೇ ಎಂದು ನೋಡಬೇಕಾಗಿದೆ.

3 comments:

ರಾಜೇಶ್ ನಾಯ್ಕ said...

ಹಿಚ್ಕಡ ಕೂರ್ವೆಯ ಪರಿಚಯ ಮಾಡಿದ್ದಕ್ಕೆ ಥ್ಯಾಂಕ್ಸ್. ಕೂರ್ವೆಗಳಿಗೆ ತಮ್ಮದೇ ಆದ ಸೌಂದರ್ಯವಿರುತ್ತದೆ. ಆದರೆ ಈ ಸೌಂದರ್ಯದ ಹಿಂದೆ ಆಡಗಿರುವ ಮಳೆಗಾಲದ ತೊಂದರೆಗಳ ಬಗ್ಗೆಯೂ ಅರಿವು ಮೂಡಿಸಿದ್ದಕ್ಕೆ ಇನ್ನೊಮ್ಮೆ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ನಮ್ಮ ಸುತ್ತಮುತ್ತೇ ಎಂತಹ ಸುಂದರ ಸ್ಥಳಗಳಿರುತ್ತೆ ಮತ್ತು ಅಲ್ಲಿನವರ ಸಂಕಷ್ಟಗಳು - ಎರಡನ್ನೂ ಒಂದೇ ಬರಹದಲ್ಲಿ ಸುಂದರವಾಗಿ ತೋರಿಸಿರುವಿರಿ. ಒಮ್ಮೆ ಹಿಚ್ಕಡ ಕೂರ್ವೆಗೆ ಹೋಗಬೇಕೆಂಬ ಆಸೆಯಿದೆ.

ಪ್ರಮೋದ ನಾಯಕ said...

ರಾಜೇಶ್ ನಾಯ್ಕ್ ರಿಗೂ ಮತ್ತು ಡಿ.ಜಿ. ಅವರಿಗೆ ಧನ್ಯವಾದಗಳು.. ನದಿಮಧ್ಯದಲ್ಲಿ ನಿಂತು ಸುತ್ತ ಮುತ್ತಲಿನ ಹಳ್ಳಿಗಳನ್ನು ನೋಡಿದಾಗ ಆಗುವ ಖುಷಿ ತುಂಬಾ ವಿಶೇಷವಾದದ್ದು..